ಮನೋರಂಜನೆ

ಪಶುವೈದ್ಯೆ ಅತ್ಯಾಚಾರಿ ತನ್ನ ಹೆಂಡತಿಯನ್ನು ಅತ್ಯಾಚಾರಗೈದಿದ್ದಾನೆ: ರಾಮ್ ಗೋಪಾಲ್

Pinterest LinkedIn Tumblr


ಹೈದರಾಬಾದ್: ಕಳೆದ ವರ್ಷ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಇದೀಗ ಈ ಪ್ರಕರಣವನ್ನು ರಾಮ್ ಗೋಪಾಲ್ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ.

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪಶುವೈದ್ಯೆಯ ಪ್ರಕರಣವನ್ನು ಸಿನಿಮಾವನ್ನಾಗಿ ಮಾಡುತ್ತಿದ್ದಾರೆ. ಹೀಗಾಗಿ ಅವರು ನಾಲ್ವರು ಆರೋಪಿಯಲ್ಲಿ ಒಬ್ಬನಾದ ಚೆನ್ನಕೇಶವುಲು ಪತ್ನಿ ರೇಣುಕರನ್ನು ಸಂದರ್ಶನ ಮಾಡಿದ್ದಾರೆ. ಸಂದರ್ಶನದ ನಂತರ ಪಶುವೈದ್ಯೆ ರೇಪಿಸ್ಟ್ ತನ್ನ ಪತ್ನಿಯ ಮೇಲೂ ಅತ್ಯಾಚಾರಗೈದಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.

ರಾಮ್ ಗೋಪಾಲ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಪಶುವೈದ್ಯೆ ಅತ್ಯಾಚಾರಿ ಚೆನ್ನಕೇಶವುಲುವಿನ ಪತ್ನಿ ರೇಣುಕಾಳನ್ನು ಈಗ ತಾನೇ ಭೇಟಿ ಮಾಡಿದೆ. 16 ವರ್ಷವಿದ್ದಾಗ ರೇಣುಕಾ ಚೆನ್ನಕೇಶವುಲುನನ್ನು ಮದುವೆ ಆಗಿದ್ದಳು. ಈಗ 17ನೇ ವರ್ಷಕ್ಕೆ ಆಕೆ ಮಗುವಿಗೆ ಜನ್ಮ ನೀಡುತ್ತಿದ್ದಾಳೆ. ದಿಶಾ ಮಾತ್ರವಲ್ಲ, ಆತ ತನ್ನ ಪತ್ನಿಯನ್ನು ಸಹ ಸಂತ್ರಸ್ತೆಯನ್ನಾಗಿ ಮಾಡಿದ್ದಾನೆ. ಆಕೆಯೇ ಒಂದು ಮಗುವಾಗಿದ್ದುಕೊಂಡು ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದ್ದಾಳೆ. ಆದರೆ ಇಬ್ಬರಿಗೂ ಭವಿಷ್ಯ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಹೈದ್ರಾಬಾದ್ ಪೊಲೀಸರು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದರು. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆಗೈದಿದ್ದರು. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದರು.

ಚೆನ್ನಕೇಶವುಲು ಹಾಗೂ ಉಳಿದ ಮೂರು ಆರೋಪಿಗಳನ್ನು ಎನ್‍ಕೌಂಟರ್ ಮಾಡಲಾಗಿತ್ತು. ಈ ವೇಳೆ ಚೆನ್ನಕೇಶವುಲು ಪತ್ನಿ, ಮದುವೆಯಾದ ಒಂದು ವರ್ಷದೊಳಗೆ ನನ್ನ ಪತಿ ನನ್ನನ್ನು ಬಿಟ್ಟು ಹೋಗಿದ್ದಾರೆ. ದಯವಿಟ್ಟು ನನಗೆ ಎನ್‍ಕೌಂಟರ್ ಆದ ಜಾಗಕ್ಕೆ ಕರೆದುಕೊಂಡು ಹೋಗಿ. ನಾನು ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಥವಾ ನೀವೇ ನನ್ನನ್ನು ಕೊಲೆ ಮಾಡಿ. ನನ್ನ ಪತಿ ಇಲ್ಲದೆ ನನಗೆ ಬದುಕಲು ಆಗುವುದಿಲ್ಲ ಎಂದು ಕಣ್ಣೀರು ಹಾಕುವ ಮೂಲಕ ತನ್ನ ನೋವನ್ನು ಹೊರಹಾಕಿದ್ದಳು.

Comments are closed.