ರಾಷ್ಟ್ರೀಯ

ಭೂಮಿ ವಿವಾದಕ್ಕೆ ಸಂಬಂಧಿಸಿ ಹಗ್ಗದಲ್ಲಿ ಕಟ್ಟಿ ಶಿಕ್ಷಕಿಗೆ ಥಳಿಸಿ ಕ್ರೌರ್ಯ ಮೆರೆದ ಟಿಎಂಸಿ ನಾಯಕ !

Pinterest LinkedIn Tumblr

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​​ ನಾಯಕನೊಬ್ಬ ಪ್ರೌಢಶಾಲಾ ಶಿಕ್ಷಕಿ ಮೇಲೆ ಕ್ರೌರ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಟಿಎಂಸಿ ಗ್ರಾಮ ಪಂಚಾಯತ್​ ನಾಯಕನ ನೇತೃತ್ವದಲ್ಲಿ ಕೆಲ ಕಾರ್ಯಕರ್ತರು ಹಗ್ಗದಿಂದ ಶಿಕ್ಷಕಿಯ ಮೊಣಕಾಲು ಕಟ್ಟಿ, ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಥಳಿಸಿದ್ದಾರೆ. ಈ ಘಟನೆ ಜನವರಿ 31ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಹಲ್ಲೆಗೊಳಗಾದ ಶಿಕ್ಷಕಿಯನ್ನು ಸ್ಮೃತಿ ದಾಸ್​ ಎಂದು ಗುರುತಿಸಲಾಗಿದೆ. ತನ್ನ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡುತ್ತಿದ್ದುದನ್ನು ವಿರೋಧಿಸಿ ಶಿಕ್ಷಕಿ ಪ್ರತಿಭಟನೆಗೆ ಮುಂದಾಗಿದ್ದರು.

ಇದರಿಂದ ಆಕ್ರೋಶಗೊಂಡ ಟಿಎಂಸಿ ಪಕ್ಷದ ಗ್ರಾಮ ಪಂಚಾಯಿತಿ ಉಪ ಪ್ರಧಾನನಾಗಿರುವ ಅಮಲ್​ ಸರ್ಕಾರ್​ ಕರುಣೆ ಇಲ್ಲದೇ ನಿರ್ದಯೆಯಿಂದ ಮಹಿಳೆಯನ್ನು ಥಳಿಸಿದ್ದಾರೆ. ನಾಲ್ಕೈದು ಜನರ ಗುಂಪು ಆಕೆಯ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ರಸ್ತೆಗೆ ಎಳೆದುಕೊಂಡು ಬಂದು ಮನಬಂದಂತೆ ಥಳಿಸಿದ್ಧಾರೆ. ಅಷ್ಟೇ ಅಲ್ಲದೇ, ಆಕೆಯ ಸಹೋದರಿ ಸೋಮಾ ದಾಸ್​​ ಮೇಲೂ ಹಲ್ಲೆ ನಡೆಸಿದ್ದಾರೆ. ರಸ್ತೆಗೆ ಎಳೆತಂದು ಹೊಡೆದಿದ್ದಾರೆ ಎನ್ನಲಾಗಿದೆ.

“ನಾನು ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ನನ್ನ ಮೇಲೆ ಟಿಎಂಸಿ ನಾಯಕ ಸರ್ಕಾರ್​ ಸೇರಿ ಕಾರ್ಯಕರ್ತರು ಹಲ್ಲೆ ಮಾಡಿದ್ಧಾರೆ. ಅವರು ನನ್ನ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದಾರೆ. ಈ ಸಂಬಂಧ ನಾನು ಪೊಲೀಸರಿಗೆ ದೂರು ನೀಡಿದ್ದೇನೆ,” ಎಂದು ದೌರ್ಜನ್ಯಕ್ಕೊಳಗಾದ ಮಹಿಳೆ ಹೇಳಿದ್ದಾರೆ.

ಹಲ್ಲೆಗೊಳಗಾದ ಇಬ್ಬರು ಮಹಿಳೆಯರೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ನೀಡಿದ ಬಳಿಕ ಸೋಮಾ ದಾಸ್​ ಹಾಗೂ ಸ್ಮೃತಿ ದಾಸ್​​ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ಧಾರೆ. ಈ ಕ್ರೌರ್ಯದ ವಿಡಿಯೋ ಎಲ್ಲೆಡೆ ವೈರಲ್ ಆದ ಬಳಿಕ ತೃಣಮೂಲ ಕಾಂಗ್ರೆಸ್​​​ ಅಮಲ್​ ಸರ್ಕಾರ್​​ ಅವರನ್ನು ಪಕ್ಷದಿಂದ ವಜಾ ಮಾಡಿದೆ.

Comments are closed.