ರಾಷ್ಟ್ರೀಯ

ಮಗುವನ್ನು ಉಸಿರುಗಟ್ಟಿ ಸಾಯಿಸಿ ಬೆಡ್ ನೊಳಗೆ ಸುತ್ತಿಟ್ಟು ಪ್ರಿಯಕರನ ಜತೆ ಪರಾರಿಯಾದ ತಾಯಿ!

Pinterest LinkedIn Tumblr


ಚಂಡೀಗಢ್:ಎರಡೂವರೆ ವರ್ಷದ ಮಗುವನ್ನು ಉಸಿರುಗಟ್ಟಿ ಸಾಯಿಸಿ ನಂತರ ಶವವನ್ನು ಬೆಡ್ ಒಳಗೆ ಸುತ್ತಿಟ್ಟು ಮಗುವಿನ ತಾಯಿ ಪ್ರಿಯಕರನ ಜತೆ ಓಡಿಹೋಗಿರುವ ಘಟನೆ ಚಂಡೀಗಢ ಸಮೀಪದ ಬುರೈಲ್ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಪತ್ನಿ ಮಗುವನ್ನು ಕೊಂದು ಬೆಡ್ ನೊಳಗೆ ಸುತ್ತಿಟ್ಟು ಪ್ರಿಯಕರನ ಜತೆ ಓಡಿಹೋಗಿರುವುದಾಗಿ ಪತಿ ಆರೋಪಿಸಿದ್ದಾನೆ.

ಮಗುವಿನ ತಂದೆ ದಶ್ ರಥ್ ಇಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಕೆಲಸ ಮುಗಿಸಿ ಬಂದಾಗ ಪತ್ನಿ ಮತ್ತು ಮಗು ಮನೆಯಲ್ಲಿ ಇರಲಿಲ್ಲ. ಬಹುಶಃ ಪತ್ನಿ ಮಗುವಿನ ಜತೆ ತವರು ಮನೆಗೆ ಹೋಗಿರಬೇಕು ಎಂದು ಪತಿ ಭಾವಿಸಿದ್ದ. ನಂತರ ಪತ್ನಿಗೆ ಕರೆ ಮಾಡಿದಾಗ, ಮಗುವನ್ನು ಬೆಡ್ ನೊಳಗೆ ಸುತ್ತಿ ಇಟ್ಟಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ನಂತರ ಬೆಡ್ ಅನ್ನು ತೆರೆದು ನೋಡಿದಾಗ ಎರಡೂವರೆ ವರ್ಷದ ಮಗನ ಶವ ಪತ್ತೆಯಾಗಿತ್ತು. ಕೂಡಲೇ ಪೊಲೀಸರಿಗೆ ಕರೆ ಮಾಡಿ ತನ್ನ ಪತ್ನಿ ಮಗುವನ್ನು ಕೊಲೆ ಮಾಡಿ, ಪ್ರಿಯಕರನ ಜತೆ ಓಡಿಹೋಗಿರುವುದಾಗಿ ತಿಳಿಸಿದ್ದ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ರೂಪ ತಾನೇ ಮಗುವನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ. ಕಳೆದ ವರ್ಷ ಮಗಳನ್ನು ಕೂಡಾ ಹತ್ಯೆಗೈದಿರುವುದಾಗಿ ತಿಳಿಸಿದ್ದಾಳೆ. ಈ ಎರಡೂ ಪ್ರಕರಣದ ಹಿಂದೆ ಪ್ರಿಯಕರ ಶಾಮೀಲಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

2016ರಲ್ಲಿ ದಶ್ ರಥ್ ರೂಪಾಳನ್ನು ವಿವಾಹವಾಗಿದ್ದ. 2017ರಲ್ಲಿ ಮಗ ದಿವ್ಯಾಂಶು ಜನಿಸಿದ್ದ. 2019ರಲ್ಲಿ ಮಗಳು ಕೋಮಲ ಜನಿಸಿದ್ದಳು. ಅದೇ ವರ್ಷ ಹೆಣ್ಣು ಮಗು ನಿಗೂಢವಾಗಿ ಸಾವನ್ನಪ್ಪಿತ್ತು ಎಂದು ವರದಿ ವಿವರಿಸಿದೆ.

ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ಖಚಿತ ಮಾಹಿತಿ ಪಡೆದು ರೂಪಾಳನ್ನು ಬಂಧಿಸಿದ್ದರು. ರೂಪಾಳ ವಿರುದ್ಧ ಭಾರತೀಯ ದಂಡ ಸಂಹಿತೆ 302ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

Comments are closed.