ಅಂತರಾಷ್ಟ್ರೀಯ

43 ದೇಶಗಳಲ್ಲಿ ಅಂಗಾಂಗ ದಾನದ ಮಹತ್ವ ಸಾರುತ್ತಿರುವ ಭಾರತೀಯ ಮೂಲದ ದಂಪತಿ!

Pinterest LinkedIn Tumblr


ವಾಷಿಂಗ್ಟನ್:ಅಂಗಾಂಗ ದಾನದ ಕುರಿತು ವಿಶ್ವಾದ್ಯಂತ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತೀಯ ಮೂಲದ ಅಮೆರಿಕದ ಉದ್ಯಮಿ ಅನಿಲ್ ಶ್ರೀವತ್ಸ ಅವರು 400 ದಿನಗಳಲ್ಲಿ 43 ದೇಶ ಸುತ್ತುವ ಮೂಲಕ 73 ಸಾವಿರ ಜನರ ಜತೆ ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ಅರಿವು ಮೂಡಿಸಿರುವುದಾಗಿ ವರದಿ ತಿಳಿಸಿದೆ.

2014ರಲ್ಲಿ ತನ್ನ ಒಂದು ಕಿಡ್ನಿಯನ್ನು ಸಹೋದರನಿಗೆ ನೀಡಿದ ನಂತರ ಅನಿಲ್ ಶ್ರೀವತ್ಸ ಅವರು ಗಿಫ್ಟ್ ಆಫ್ ಲೈಫ್ ಅಡ್ವೆಂಚರ್ ಆರಂಭಿಸಿದ್ದರು. ಈ ಮೂಲಕ ಜಗತ್ತಿನಾದ್ಯಂತ ಅಂಗಾಂಗ ದಾನದ ಕುರಿತು ಅರಿವು ಮೂಡಿಸಬೇಕೆಂಬ ಮಹದಾಸೆ ಶ್ರೀವತ್ಸ ಅವರದ್ದಾಗಿದೆ ಎಂದು ಇಂಡಿಯಾ-ವೆಸ್ಟ್ ನ್ಯೂಸ್ ಪೇಪರ್ ವರದಿ ಮಾಡಿದೆ.

ನಾನು ನನ್ನ ಸಹೋದರನಿಗೆ ಅಂಗಾಂಗ ದಾನ ಮಾಡಲು ಪ್ರೀತಿಯೇ ಕಾರಣ. ನನ್ನ ಅಭಿಪ್ರಾಯದ ಪ್ರಕಾರ, ಬೇರೆ ಯಾರಿಗೆ ಆಗಲಿ ಅಂಗಾಂಗ ದಾನ ಮಾಡಬೇಕಿದ್ದರೆ ಅದಕ್ಕೆ ಪ್ರೀತಿಯೊಂದೇ ಕಾರಣವಾಗಲಿದೆ. ನಿಮಗೆ ವೈಯಕ್ತಿಕವಾಗಿ ಪರಿಚಯವಿರುವವರ ಬಗ್ಗೆ ಪ್ರೀತಿ ಇರಬಹುದು ಅಥವಾ ಅಗತ್ಯಬಿದ್ದಾಗ ಪ್ರೀತಿಯಿಂದ ಅಪರಿಚಿತ ವ್ಯಕ್ತಿಗೆ ನೆರವು ನೀಡಬೇಕಾದ ಅಗತ್ಯವಿದೆ ಎಂದು ಶ್ರೀವತ್ಸ ತಿಳಿಸಿರುವುದಾಗಿ ವರದಿ ಹೇಳಿದೆ.

ಕಳೆದ 400 ದಿನಗಳಲ್ಲಿ ಅನಿಲ್ ಶ್ರೀವತ್ಸ ದಂಪತಿ ಅವರು 43 ದೇಶಗಳಲ್ಲಿ 100,000 ಲಕ್ಷ ಕಿಲೋ ಮೀಟರ್ ಸಂಚರಿಸಿ 73 ಸಾವಿರ ಜನರನ್ನು ಭೇಟಿಯಾಗಿ ಅಂಗಾಂಗ ದಾನದ ಕುರಿತು ಅರಿವು ಮೂಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಅನಿಲ್ ಅವರ ಅರಿವು ಮೂಡಿಸುವ ಈ ಕೆಲಸಕ್ಕೆ ಸಾಥ್ ಕೊಟ್ಟಿದ್ದು ಪತ್ನಿ ದೀಪಾಲಿ. ತಾವೇ ಅಡುಗೆ ಮಾಡುತ್ತ ಕಾರಿನಲ್ಲಿ ಪ್ರಯಾಣಿಸುವ ದಂಪತಿಗೆ ಸ್ಥಳೀಯರು ಆಹಾರ ನೀಡಿದರೆ ಅದನ್ನು ಸ್ವೀಕರಿಸಿ ಮತ್ತೆ ಪ್ರಯಾಣ ಮುಂದುವರಿಸುತ್ತಾರೆ ಎಂದು ವರದಿ ವಿವರಿಸಿದೆ.

ಕಿಡ್ನಿ ದಾನದ ಮಹತ್ವ, ಅದರ ಕುರಿತ ಕಾನೂನು ವಿವರ ಹಾಗೂ ಅದರಿಂದ ಏನಾಗಲಿದೆ ಎಂಬಿತ್ಯಾದಿ ವಿಷಯದ ಕುರಿತು ಅನಿಲ್ ಶ್ರೀವತ್ಸ ಅವರು ಶಾಲಾ, ಕಾಲೇಜುಗಳು, ರೋಟರಿ ಕ್ಲಬ್ಸ್, ಕಮ್ಯುನಿಟಿ ಸೆಂಟರ್ಸ್ ಹಾಗೂ ಕಚೇರಿಗಳಲ್ಲಿ ಅಂಗಾಂಗ ದಾನದ ಮಹತ್ವದ ಕುರಿತು ಮಾತನಾಡಿದ್ದಾರೆ ಎಂದು ವರದಿ ತಿಳಿಸಿದೆ.

Comments are closed.