ರಾಷ್ಟ್ರೀಯ

ಜೆಎನ್ ಯು ಹಿಂಸಾಚಾರ ಕುರಿತು ತನಿಖೆಗೆ ಪೊಲೀಸರಿಂದ ಸಮಿತಿ ರಚನೆ

Pinterest LinkedIn Tumblr


ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಹಿಂಸಾಚಾರ ಪ್ರಕರಣದ ಕುರಿತು ತನಿಖೆಗೆ ದೆಹಲಿ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ ಎಂದು ದೆಹಲಿ ಪೊಲೀಸ್ ಪಿಆರ್ ಒ ಎಂಎಸ್ ರಾಂಧವ ಅವರು ಸೋಮವಾರ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತು ವಿಚಾರಣೆ ವಿಳಂಬವಾಗಬಾರದು ಎಂಬ ಉದ್ದೇಶದಿಂದ ಸಮಿತಿ ರಚಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಮಗೆ ಪ್ರಮುಖ ಸುಳಿವುಗಳು ಸಿಕ್ಕಿವೆ. ಹೀಗಾಗಿ ಶೀಘ್ರದಲ್ಲೇ ಪ್ರಕರಣವನ್ನು ಬೇಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸುತ್ತಿರುವುದನ್ನು ತಡೆಯಲು ಪೊಲೀಸರು ಯತ್ನಿಸಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರಾಂಧವ ಅವರು, ಸಾಮಾನ್ಯವಾಗಿ ಪೊಲೀಸರು ಆಡಳಿತಾತ್ಮಕ ಕಟ್ಟದ ಬಳಿ ಇರುತ್ತಾರೆ. ಆದರೆ ಆಡಳಿತ ಕಟ್ಟಡದಿಂದ ತುಂಬಾ ದೂರದಲ್ಲಿ ಹಿಂಸಾಚಾರ ನಡೆದಿದೆ ಎಂದರು.

ಸುಮಾರು 7.45ರ ಸುಮಾರಿಗೆ ಜೆಎನ್ ಯು ಆಡಳಿತ ಮಂಡಳಿಯಿಂದ ನಮಗೆ ದೂರು ಬಂತು. ಕೂಡಲೇ ನಾವು ವಿವಿಯಲ್ಲಿ ಪಥಸಂಚಲನ ನಡೆಸಿದೆವು ಎಂದು ರಾಂಧವ ತಿಳಿಸಿದ್ದಾರೆ.

ಜೆಎನ್ ಯು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ ಮತ್ತು ತನಿಖೆಯು ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿದೆ. ಘಟನೆಯಲ್ಲಿ ಒಟ್ಟು 34 ಮಂದಿ ಗಾಯಗೊಂಡಿದ್ದಾರೆ. ಚಿಕಿತ್ಸೆಯ ಬಳಿಕ ಎಲ್ಲಾ 34 ವಿದ್ಯಾರ್ಥಿಗಳನ್ನು ಏಮ್ಸ್ ನಿಂದ ಡಿಸ್ಚಾರ್ಜ್ ಮಾಡಲಾಗಿದೆ.

ನಿನ್ನೆ ಸಂಜೆ 6.30ರ ಸುಮಾರಿಗೆ ಮುಖ ಮುಚ್ಚಿಕೊಂಡಿದ್ದ ಅಂದಾಜು 50 ಜನರ ಗುಂಪು ವಿವಿ ಆವರಣಕ್ಕೆ ನುಗ್ಗಿತು. ಈ ಗುಂಪು ಹಾಸ್ಟೆಲ್​ಗೆ ನುಗ್ಗಿ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್ ಹಾಗೂ ಉಪನ್ಯಾಸಕರು ಸೇರಿದಂತೆ ಹಲವು ವಿದ್ಯಾರ್ಥಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

Comments are closed.