ಉನ್ನಾವೋ: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ 25 ಲಕ್ಷ ರೂ. ಪರಿಹಾರವನ್ನು ನೀಡಿದೆ.
ಸಂತ್ರಸ್ಥೆಯ ಕುಟುಂಬ ಸದಸ್ಯರನ್ನು ಇಂದು ಭೇಟಿ ಮಾಡಿದ ಸಂಪುಟ ಸಚಿವ ಸ್ವಾಮಿ ಪ್ರಸಾದ್ ಮೌರ್ಯ, ಮುಖ್ಯಮಂತ್ರಿಗಳ ನಿಧಿಯಿಂದ 25 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ. ಪ್ರಕರಣದ ವಿಚಾರಣಗಾಗಿ ತ್ವರಿತಗತಿಯ ನ್ಯಾಯಾಲಯ ಸ್ಥಾಪಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಇಡೀ ಸರ್ಕಾರ ಸಂತ್ರಸ್ಥೆಯ ಕುಟುಂಬದ ಜೊತೆಗೆ ಇದೆ. ಈ ಪ್ರಕರಣವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಂತ್ರಸ್ಥೆ ಸಾವಿಗೆ ನ್ಯಾಯ ಒದಗಿಸಲಾಗುವುದು. ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಅವರು ಹೇಳಿದರು.
ಸಂತ್ರಸ್ಥೆಯ ಕುಟುಂಬಸ್ಥರು ಯಾವ ರೀತಿ ವಿಚಾರಣೆ ಬಯಸುತ್ತಾರೋ ಅದೇ ರೀತಿಯ ವಿಚಾರಣೆ ನಡೆಸಲಾಗುವುದು. ಆರೋಪಿಗಳ ಹೆಸರನ್ನು ಸಂತ್ರಸ್ಥೆಯಿಂದ ಪಡೆಯಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಯಾರನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು. ಈ ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವುದಾಗಿ ಸ್ಥಳೀಯ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಆರೋಪಿಗಳು ಬೆಂಕಿ ಹಚ್ಚಿದ್ದರಿಂದ ನವ ದೆಹಲಿಯ ಸಪ್ದರ್ ಜಂಗ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅತ್ಯಾಚಾರ ಸಂತ್ರಸ್ಥೆ ನಿನ್ನೆ ರಾತ್ರಿ ಮೃತಪಟ್ಟರು.
Comments are closed.