ರಾಷ್ಟ್ರೀಯ

ಕೋವಿಂದ್ ಅವರು ಯಾವತ್ತೂ ಕ್ಷಮಾದಾನ ಅರ್ಜಿಗೆ ಸಹಿ ಹಾಕುವುದಿಲ್ಲ, ವಾಪಸ್ ಪಡೆಯುವೆ; ನಿರ್ಭಯಾ ಗ್ಯಾಂಗ್ ರೇಪ್ ಆರೋಪಿ

Pinterest LinkedIn Tumblr


ನವದೆಹಲಿ: 2012ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ವಿನಯ್ ಶರ್ಮಾ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಯಾವತ್ತೂ ಕ್ಷಮಾದಾನ ಅರ್ಜಿಗೆ ಸಹಿ ಹಾಕುವುದಿಲ್ಲ. ಈ ಹಿನ್ನೆಲೆಯಲ್ಲಿ ಕ್ಷಮಾದಾನ ಅರ್ಜಿಯನ್ನು ಕೂಡಲೇ ವಾಪಸ್ ಪಡೆಯುವ ಬಗ್ಗೆ ರಾಷ್ಟ್ರಪತಿಗೆ ಮನವಿ ಮಾಡಿಕೊಳ್ಳಲಿದ್ದಾನೆ ಎಂದು ವರದಿ ತಿಳಿಸಿದೆ.

ಕ್ಷಮಾದಾನ ಅರ್ಜಿಯನ್ನು ವಾಪಸ್ ಪಡೆಯಲು ರಾಷ್ಟ್ರಪತಿಯವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ವಿನಯ್ ಶರ್ಮಾ ಪರ ವಕೀಲ ಎಪಿ ಸಿಂಗ್ ಶನಿವಾರ ತಿಳಿಸಿದ್ದು, ಕೇಂದ್ರ ಗೃಹ ಸಚಿವಾಲಯದ ಮೂಲಕ ರಾಷ್ಟ್ರಪತಿಯವರಿಗೆ ಕಳುಹಿಸಿಕೊಟ್ಟ ಕ್ಷಮಾದಾನ ಅರ್ಜಿಗೆ ಈವರೆಗೂ ಸಹಿ ಹಾಕಿಲ್ಲ ಎಂದು ಆರೋಪಿಸಿದ್ದಾರೆ. ಇದರ ಹಿಂದೆ ಪಿತೂರಿ ಇದ್ದು, ಈವರೆಗೂ ಪೂರ್ವಾನುಮತಿ ಅರ್ಜಿ ಸಲ್ಲಿಸಿಲ್ಲ ಎಂದರು.

ಇದೊಂದು ಪಿತೂರಿಯಾಗಿದ್ದು, ಆರೋಪಿ ಇನ್ನಷ್ಟೇ ಪೂರ್ವಾನುಮತಿ ಅರ್ಜಿಯನ್ನು ಸಲ್ಲಿಸಬೇಕಾಗಿದೆ ಎಂದು ಎಪಿ ಸಿಂಗ್ ತಿಳಿಸಿದ್ದಾರೆ. ಆರೋಪಿ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ಕುರಿತು ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ಕ್ಷಮಾದಾನ ಅರ್ಜಿ ತಿರಸ್ಕರಿಸಲು ಅರ್ಹವಾಗಿದೆ. ಇದೊಂದು ಭೀಬತ್ಸ ಮತ್ತು ಕ್ರೂರತನ ಅಪರಾಧವಾಗಿದೆ ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿತ್ತು.

ಅಲ್ಲದೇ ಪೋಸ್ಕೋ ಕಾಯ್ದೆಯಡಿ ಬಂಧನಕ್ಕೊಳಗಾದ ಅತ್ಯಾಚಾರಿ ಆರೋಪಿಗಳ ಕ್ಷಮಾದಾನ ಅರ್ಜಿಯನ್ನು ಪರಿಗಣಿಸುವುದೇ ಇಲ್ಲ. ಈ ಬಗ್ಗೆ ಸಂಸತ್ ಹೊಸ ಕಾಯ್ದೆ ಮಾಡುವ ಬಗ್ಗೆ ಪರಿಶೀಲಿಸಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೈದರಾಬಾದ್ ಘಟನೆ ಹಿನ್ನೆಲೆಯಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಆರೋಪಿಗಳನ್ನು ಗಲ್ಲಿಗೇರಿಸಲೇಬೇಕು ಎಂದು ನಿರ್ಭಯಾ ತಾಯಿ ಆಗ್ರಹಿಸಿದ್ದರು, ನಾನು ನ್ಯಾಯಕ್ಕಾಗಿ ಕಳೆದ ಏಳು ವರ್ಷಗಳಿಂದ ಕಾಯುತ್ತಲೇ ಇದ್ದೇನೆ. ಆದಷ್ಟು ಶೀಘ್ರವಾಗಿ ನಿರ್ಭಯಾ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಈ ದೇಶದ ನ್ಯಾಯಾಂಗ ಮತ್ತು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.

2012ರ ಡಿಸೆಂಬರ್ 16ರಂದು 23 ವರ್ಷದ ನಿರ್ಭಯಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಪೈಶಾಚಿಕವಾಗಿ ಹಿಂಸೆ ನೀಡಿದ್ದು, ಜೀವನ್ಮರಣ ಹೋರಾಟ ನಡೆಸಿ ಆಕೆ ಸಾವನ್ನಪ್ಪಿದ್ದಳು. ಈ ಘಟನೆಗೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಎಲ್ಲಾ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ಓರ್ವ ಬಾಲಾಪರಾಧಿ ಹಾಗೂ ಮತ್ತೊಬ್ಬ ಆರೋಪಿ ತಿಹಾರ್ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ಬಾಲಾಪರಾಧಿ ಬಿಡುಗಡೆಗೊಂಡಿದ್ದು, ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ 2013ರಲ್ಲಿ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

Comments are closed.