
ಚೆನ್ನೈ: ಸಾಲಕ್ಕೆ ಅರ್ಜಿ ಹಾಕಿದ್ದ ಬ್ಯಾಂಕ್ ಗ್ರಾಹಕರೊಬ್ಬರ ಸಾಲದ ಅರ್ಜಿಯನ್ನು ಬ್ಯಾಂಕ್ ತಿರಸ್ಕರಿಸಿದ ಹಿನ್ನಲೆಯಲ್ಲಿ ಸಿಟ್ಟಿಗೆದ್ದ ಆ ವ್ಯಕ್ತಿ ಬ್ಯಾಂಕ್ ಶಾಖೆಗೆ ನುಗ್ಗಿ ಅಲ್ಲಿನ ಮ್ಯಾನೇಜರ್ ಹಾಗೂ ಇನ್ನಿತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನಿಂದ ವರದಿಯಾಗಿದೆ.
ಈ ರೀತಿಯಾಗಿ ಗೂಂಡಾಗಿರಿ ಪ್ರದರ್ಶಿಸಿರುವ ವ್ಯಕ್ತಿಯನ್ನು ವೆಟ್ರಿವಲ್ ಎಂದು ಗುರುತಿಸಲಾಗಿದೆ. ಕೊಯಂಬತ್ತೂರಿನಲ್ಲಿ ಮೋಟಾರು ತಯಾರಿಕಾ ಕಂಪೆನಿಯೊಂದನ್ನು ನಡೆಸುತ್ತಿರುವ ಈತ ತನ್ನ ಆಸ್ತಿಯನ್ನು ಅಡವಿರಿಸಿ ಒಂದು ಕೋಟಿ ರೂಪಾಯಿ ಸಾಲಕ್ಕೆ ಕಳೆದ ಮಾರ್ಚ್ ನಲ್ಲಿ ಇಲ್ಲಿನ ಕೆನರಾ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ ಸಾಲದ ಮೊತ್ತ ಜಾಸ್ತಿಯಿದ್ದ ಕಾರಣಕ್ಕೆ ಆತನ ಅರ್ಜಿ ತಿರಸ್ಕೃತಗೊಂಡಿತ್ತು.
ಮಾತ್ರವಲ್ಲದೇ ಖಂಡಿತವಾಗಿಯೂ ಬ್ಯಾಂಕ್ ಸಾಲ ತೆಗೆಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದ ಮದ್ಯವರ್ತಿಯೊಬ್ಬನಿಗೆ ವೆಟ್ರಿವಲ್ ಮೂರು ಲಕ್ಷ ರೂಪಾಯಿಗಳನ್ನು ಬೇರೆ ಪಾವತಿಸಿದ್ದ. ಇದೀಗ ತನ್ನ ಸಾಲದ ಅರ್ಜಿ ತಿರಸ್ಕೃತಗೊಂಡದ್ದರಿಂದ ಮತ್ತು ಮೂರು ಲಕ್ಷ ರೂಪಾಯಿಗಳು ಕೈಬಿಟ್ಟು ಹೋದ ಸಿಟ್ಟಿನಿಂದ ವೆಟ್ರಿವಲ್ ಪಿಸ್ತೂಲ್ ಮತ್ತು ಚಾಕುವಿನೊಂದಿಗೆ ನೇರವಾಗಿ ಬ್ಯಾಂಕ್ ಶಾಖೆಗೆ ನುಗ್ಗಿ ಮ್ಯಾನೇಜರ್ ಮೇಲೆ ಹಾಗೂ ದಾಳಿ ತಡೆಯಲು ಬಂದ ಇನ್ನಿಬ್ಬರ ಮೇಲೆ ಯದ್ವಾ ತದ್ವ ಹಲ್ಲೆ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೀಗ ವೆಟ್ರಿವಲ್ ನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ತಾನು ಭಾರೀ ಸಾಲದ ಸುಳಿಯಲ್ಲಿ ಸಿಲುಕಿದ್ದು ತನಗೆ ತುರ್ತು ಹಣದ ಅವಶ್ಯಕತೆ ಇದೆ ಹಾಗಾಗಿ ಬ್ಯಾಂಕ್ ತನಗೆ ಸಾಲ ನೀಡದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವೆಟ್ರಿವಲ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
Comments are closed.