ರಾಷ್ಟ್ರೀಯ

ದೇಶದ ಎರಡನೇ ಬಾಹ್ಯಾಕಾಶ ಬಂದರಿಗೆ ತಮಿಳುನಾಡು ಸಜ್ಜು

Pinterest LinkedIn Tumblr

ಹೊಸದಿಲ್ಲಿ: ಮುಂದಿನ ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಚಟುವಟಿಕೆಗಳನ್ನು ವಿಸ್ತರಿಸಲಿರುವ ಹಿನ್ನೆಲೆಯಲ್ಲಿ ದೇಶದ ಎರಡನೇ ಬಾಹ್ಯಾಕಾಶ ಬಂದರಿಗೆ ತಮಿಳುನಾಡು ಸಜ್ಜಾಗುತ್ತಿದೆ.

“ತಮಿಳುನಾಡಿನ ಕುಲಶೇಖರಪಟ್ಟಿಣಂ ಬಳಿ ರಾಕೆಟ್ ಉಡಾವಣಾ ಕೇಂದ್ರ ನಿರ್ಮಾಣದ ಪ್ರಸ್ತಾವ ಸರ್ಕಾರದ ಮುಂದಿದೆ” ಎಂದು ಕೇಂದ್ರ ಬಾಹ್ಯಾಕಾಶ ಖಾತೆ ಸಚಿವ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ತಿಳಿಸಿದ್ದಾರೆ. ಇದನ್ನು ಇಸ್ರೋ ಅಧ್ಯಕ್ಷ ಕೆ.ಶಿವನ್ ದೃಢಪಡಿಸಿದ್ದು, “ಭಾರತದ ಎರಡನೇ ಬಾಹ್ಯಾಕಾಶ ಬಂದರು ಸ್ಥಾಪನೆಗೆ ತೂತುಕುಡಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.

ಪ್ರಮುಖ ಬಾಹ್ಯಾಕಾಶ ಚಟುವಟಿಕೆ ನಡೆಸುತ್ತಿರುವ ದೇಶಗಳು ಒಂದಕ್ಕಿಂತ ಹೆಚ್ಚು ರಾಕೆಟ್ ಉಡಾವಣಾ ಕೇಂದ್ರಗಳನ್ನು ಹೊಂದಿವೆ.
ತೂತುಕುಡಿ ಬಾಹ್ಯಾಕಾಶ ಬಂದರು ಮುಖ್ಯವಾಗಿ ಹೊಸದಾಗಿ ಅಭಿವೃದ್ಧಿಪಡಿಸಿದ ಚಿಕ್ಕ ಉಪಗ್ರಹ ಉಡಾವಣಾ ವಾಹನಗಳ (ಎಸ್‌ಎಸ್‌ಎಲ್‌ವಿ ಅಥವಾ ಮಿನಿ-ಪಿಎಸ್‌ಎಲ್‌ವಿ) ಉಡಾವಣೆಗೆ ಬಳಕೆಯಾಗಲಿದೆ. ಆರಂಭಿಕ ಹಂತದಲ್ಲಿ ಎಸ್‌ಎಸ್‌ಎಲ್‌ವಿಗಳು ಕೂಡಾ ಶ್ರೀಹರಿ ಕೋಟಾದಿಂದ ಉಡಾವಣೆಯಾಗಲಿವೆ. ಆದರೆ ಎರಡನೇ ಬಾಹ್ಯಾಕಾಶ ಬಂದರು ಸಿದ್ಧವಾಗುತ್ತಿದ್ದಂತೆ ಎಸ್‌ಎಸ್‌ಎಲ್‌ವಿ ಉಡಾವಣೆಯನ್ನು ಅಲ್ಲಿಗೆ ವರ್ಗಾಯಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಡಿಮೆ ಪೇಲೋಡ್ ಸಾಮರ್ಥ್ಯದ ಅಂದರೆ 500 ಕೆಜಿ ಸಾಮರ್ಥ್ಯದ ಮೊಟ್ಟಮೊದಲ ಎಸ್‌ಎಸ್‌ಎಲ್‌ವಿ ಉಡಾವಣೆ 2020ರ ಮೊದಲ ತ್ರೈಮಾಸಿಕದಲ್ಲಿ ನಡೆಯಲಿದೆ. ಬೇಡಿಕೆಯನ್ನು ಆಧರಿಸಿ ಉಳಿದ ರಾಕೆಟ್‌ಗಳನ್ನು ಪ್ರಸ್ತಾವಿತ ಬಾಹ್ಯಾಕಾಶ ಬಂದರಿನಿಂದ ಉಡಾಯಿಸಲಾಗುವುದು ಎಂದು ಹೇಳಿದ್ದಾರೆ. ನೇರ ದಕ್ಷಿಣಮುಖಿ ಉಡಾವಣೆಗಳು ತಮಿಳುನಾಡಿನ ಕೇಂದ್ರದಿಂದ ಸಾಧ್ಯವಾಗಲಿದೆ. ನೇರ ಮಾರ್ಗದ ಕಾರಣದಿಂದ ಹೆಚ್ಚಿನ ಪೇಲೋಡ್ ಒಯ್ಯಬಹುದಾಗಿದೆ. ಇದೀಗ ಶ್ರೀಹರಿ ಕೋಟಾದಿಂದ ರಾಕೆಟ್‌ಗಳನ್ನು ದಕ್ಷಿಣಾಭಿಮುಖವಾಗಿ ಉಡಾಯಿಸಲು ಅವಕಾಶವಿಲ್ಲ ಎಂದು ವಿವರಿಸಿದ್ದಾರೆ.

Comments are closed.