ರಾಷ್ಟ್ರೀಯ

ವಿಶ್ವದ ಅತ್ಯಂತ ಕರಾಳ ಕೈಗಾರಿಕಾ ದುರಂತ ಹಿನ್ನೆಲೆ ಫ್ಯಾಕ್ಟರಿಯ ಆವರಣದಲ್ಲಿ ಮಾನವ ಸರಪಣಿ ರಚನೆ.

Pinterest LinkedIn Tumblr

ಭೋಪಾಲ್: ಭೋಪಾಲ್ ಅನಿಲ ದುರಂತಕ್ಕೆ 35 ವರ್ಷಗಳು ಸಂದ ಹಿನ್ನೆಲೆಯಲ್ಲಿ ದುರಂತದಲ್ಲಿ ಉಳಿದುಕೊಂಡಿದ್ದ ನೂರಾರು ಮಂದಿ, ದುರಂತಕ್ಕೆ ಕಾರಣವಾದ ಫ್ಯಾಕ್ಟರಿಯ ಆವರಣದಲ್ಲಿ ರವಿವಾರ ಮಾನವ ಸರಪಣಿ ನಿರ್ಮಿಸಿದರು.

1984ರ ಡಿಸೆಂಬರ್ 2ರಂದು ರಾತ್ರಿ ಈ ಭೀಕರ ದುರಂತ ಸಂಭವಿಸಿತ್ತು. ಅನಿಲ ಸೋರಿಕೆಯಾದ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಸಂತ್ರಸ್ತರು, ಉಚಿತ ಆರೋಗ್ಯ ಸೇವೆ ಒದಗಿಸಬೇಕು, ಕಲುಷಿತಗೊಂಡ ಜಮೀನು ಸ್ವಚ್ಛಗೊಳಿಸಬೇಕು ಮತ್ತು ಯೂನಿಯನ್ ಕಾರ್ಬೈಡ್ ಕಂಪನಿಯ ಮಾಲಕತ್ವ ಹೊಂದಿರುವ ಡೌ ಕೆಮಿಕಲ್ಸ್‌ನಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎನ್ನುವ ಆಗ್ರಹ ಮಂಡಿಸಿದರು.

ಈ ದುರಂತದಲ್ಲಿ ಮಡಿದವರ ಗೌರವಾರ್ಥವಾಗಿ ಸ್ಮಾರಕವನ್ನು ನಿರ್ಮಿಸುವ ಮಧ್ಯಪ್ರದೇಶ ಸರ್ಕಾರದ ಕ್ರಮ, ಪರಿಸರ ಹಾಗೂ ಜನತೆ ವಿರುದ್ಧ ನಡೆಯುತ್ತಿರುವ ಅಪರಾಧವನ್ನು ಮುಚ್ಚಿಹಾಕುವ ಕ್ರಮವಲ್ಲದೇ ಮತ್ತೇನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 1984ರ ಸಂತ್ರಸ್ತರ ಪರವಾಗಿ ಹೋರಾಡುತ್ತಾ ಬಂದಿರುವ ನಾಲ್ಕು ಸಂಘಟನೆಗಳು ಜತೆಯಾಗಿ ಈ ಪ್ರತಿಭಟನೆ ಆಯೋಜಿಸಿದ್ದವು.

ಇದೀಗ ಉತ್ಪಾದನೆ ಸ್ಥಗಿತಗೊಳಿಸಿರುವ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಿಂದ 1984ರ ಡಿಸೆಂಬರ್ 2ರ ರಾತ್ರಿ ವಿಷಾನಿಲ ಸೋರಿಕೆಯಾಗಿ ಸಾವಿರಾರು ಮಂದಿ ಅಸುನೀಗಿದ್ದರು ಹಾಗೂ ಲಕ್ಷಾಂತರ ಮಂದಿ ಅಸ್ವಸ್ಥರಾಗಿದ್ದರು.

“ಇದಕ್ಕೆ ಮುಖ್ಯ ಕಾರಣ ವಿಷಕಾರಿ ತ್ಯಾಜ್ಯವನ್ನು ಫ್ಯಾಕ್ಟರಿ ಆವರಣದಲ್ಲಿ ಮತ್ತು ಹೊರಗೆ ದಾಸ್ತಾನು ಮಾಡಿದ್ದು. ಫ್ಯಾಕ್ಟರಿಯಿಂದ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲ ಕಲುಷಿತಗೊಂಡಿರುವುದು 1996ರಲ್ಲಿ ತಿಳಿದುಬಂದಿದೆ. ಅಂತರ್ಜಲವನ್ನು 16 ಬಾರಿ ಪರೀಕ್ಷೆಗೆ ಗುರಿಪಡಿಸಲಾಗಿದ್ದು, ಕೀಟನಾಶ, ಘನ ಲೋಹ ಮತ್ತು ವಿಷಕಾರಿ ರಾಸಾಯನಿಕಗಳು 30 ಮೀಟರ್ ಆಳದವರೆಗೂ ಸೇರಿರುವುದು ಕಂಡುಬಂದಿದೆ” ಎಂದು ಹೋರಾಟದ ನೇತೃತ್ವ ವಹಿಸಿದ್ದ ರಶೀದಾ ಬೀ ವಿವರಿಸಿದರು.

Comments are closed.