ರಾಷ್ಟ್ರೀಯ

4 ಮಕ್ಕಳ ತಾಯಿಗೆ ಸೇಲ್ಸ್‌ಮೆನ್‌ ಮೇಲೆ ಪ್ರೀತಿ – ವಿರೋಧಿಸಿದ್ದಕ್ಕೆ ಗಂಡನ ಕೊಲೆ

Pinterest LinkedIn Tumblr


ಲಕ್ನೋ: ನಾಲ್ಕು ಮಕ್ಕಳ ತಾಯಿಗೆ ಸೇಲ್ಸ್‌ಮೆನ್‌ ಮೇಲೆ ಪ್ರೀತಿಯಾಗಿದ್ದು, ಇದನ್ನು ವಿರೋಧಿಸಿದ ಪತಿಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಸಿಕ್ಕಂದರಾದಲ್ಲಿರುವ ರಾಧಾ ನಗರದಲ್ಲಿ ನಡೆದಿದೆ.

ಹರಿ ಓಂ(36) ಕೊಲೆಯಾದ ಪತಿ. ಹರಿ ಓಂ 17 ವರ್ಷಗಳ ಹಿಂದೆ ಬಬ್ಲಿ ಜೊತೆ ಮದುವೆ ಆಗಿತ್ತು. ಈ ದಂಪತಿಗೆ ನಾಲ್ವರು ಮಕ್ಕಳು ಕೂಡ ಇದ್ದಾರೆ. ಬಬ್ಲಿ ಫೆಬ್ರವರಿಯಲ್ಲಿ ಕರಣ್ ಅಲಿಯಾಸ್ ಕಮಲ್‍ನನ್ನು ಭೇಟಿ ಮಾಡಿದ್ದಳು. ಆಗಿನಿಂದಲೂ ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರು. ಈ ವಿಷಯ ಆಕೆಯ ಪತಿಗೆ ಗೊತ್ತಾಗಿ ಇದನ್ನು ವಿರೋಧಿಸಿದ್ದನು. 20 ದಿನಗಳ ಹಿಂದೆ ಕರಣ್ ತನ್ನ ಕುಟುಂಬದ ಜೊತೆ ರಾಧಾ ನಗರದಲ್ಲಿಯೇ ವಾಸಿಸುತ್ತಿದ್ದನು.

ಹರಿ ಓಂನ ಇಬ್ಬರು ಮಕ್ಕಳು ಆತನ ತಾತನ ಬಳಿ ವಾಸಿಸುತ್ತಿದ್ದರು. ಮತ್ತೆ ಇಬ್ಬರು ಮಕ್ಕಳು ಹರಿ ಓಂ ಜೊತೆಯಲ್ಲಿ ವಾಸಿಸುತ್ತಿದ್ದರು. ನವೆಂಬರ್ 3ರಂದು ಹರಿ ಓಂ ಮನೆಯಿಂದ ನಾಪತ್ತೆಯಾಗಿದ್ದನು. ಇತ್ತ ಪತ್ನಿ ಬಬ್ಲಿ ಹಾಗೂ ಮಕ್ಕಳು ಕೂಡ ಕಾಣೆಯಾಗಿದ್ದರು. ಎರಡು ದಿನಗಳ ನಂತರ ಹರಿ ಓಂ ತಂದೆ ರಾಜ್‍ವೀರ್ ಸಿಕಂದರಾ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಬಬ್ಲಿಯನ್ನು ಹುಡುಕಲು ಶುರು ಮಾಡಿದ್ದು, ಶುಕ್ರವಾರ ಆಕೆಯನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿ ಕಮಲ್ ಕೂಡ ಸಿಕ್ಕಿ ಬಿದ್ದಿದ್ದು, ಪೊಲೀಸರು ವಿಚಾರಣೆ ನಡೆಸಿದಾಗ ಹರಿ ಓಂನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಕೊಲೆ ಮಾಡಿದ ಬಳಿಕ ಆತನ ಶವವನ್ನು ಜವಾಹರ್ ಸೇತುವೆಯಿಂದ ಯಮುನಾ ನದಿಗೆ ಎಸೆದಿರುವಾಗಿ ಆರೋಪಿಗಳು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎಎಸ್‍ಪಿ ಸೌರಭ್ ದೀಕ್ಷಿತ್, ಬಬ್ಲಿ ಆರೋಪಿ ಕಮಲ್‍ನನ್ನು ಪ್ರೀತಿಸುತ್ತಿದ್ದಳು. ಅಲ್ಲದೆ ಆತನ ಜೊತೆಯಲ್ಲಿಯೇ ವಾಸಿಸಲು ಇಷ್ಟಪಡುತ್ತಿದ್ದಳು. ಆದರೆ ಪತಿ ಇದನ್ನು ವಿರೋಧಿಸಿದ್ದಾನೆ. ಹಾಗಾಗಿ ಇಬ್ಬರು ಸೇರಿ ಆತನನ್ನು ಕೊಲೆ ಮಾಡಿದ್ದಾರೆ. ಕಮಲ್ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಜನವರಿಯಲ್ಲಿ ಬಬ್ಲಿ ಸೀರೆ ಖರೀದಿಸಲು ಶೋ ರೂಮಿಗೆ ಬಂದಿದ್ದಾಗ ಕಮಲ್ ಆಕೆಗೆ ಸೀರೆಯನ್ನು ತೋರಿಸುತ್ತಿದ್ದನು. ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು ಎಂದು ತಿಳಿಸಿದ್ದಾರೆ.

ಬಬ್ಲಿ, ಕಮಲ್‍ನನ್ನು ಪ್ರೀತಿಸುತ್ತಿರುವ ವಿಷಯ ಆಕೆಯ ಪತಿಗೆ ತಿಳಿಯಿತು. ಬಳಿಕ ಆಗಸ್ಟ್ ತಿಂಗಳಿನಲ್ಲಿ ಕಮಲ್ ಹಾಗೂ ಬಬ್ಲಿ ಓಡಿ ಹೊಗಿದ್ದರು. ಎರಡು ತಿಂಗಳಾದ ನಂತರ ಇಬ್ಬರು ಹಿಂತಿರುಗಿದ್ದರು. ಈ ವೇಳೆ ಹರಿ ಓಂ ಪತ್ನಿಗೆ ಬುದ್ಧಿ ಹೇಳಿದ್ದಾನೆ. ಬಬ್ಲಿ ತನ್ನ ಮಾತನ್ನು ಒಪ್ಪದಿದ್ದಾಗ ಹರಿ ಓಂ ಆಕೆಯ ಮೇಲೆ ಹಲ್ಲೆ ಮಾಡಿದ್ದನು. ಬಬ್ಲಿ, ಕಮಲ್‍ಗೆ ಕರೆ ಮಾಡಿ ಪತಿ ಹಲ್ಲೆ ಮಾಡಿದ ವಿಷಯವನ್ನು ತಿಳಿಸಿದ್ದಳು. ಆಗ ರಾತ್ರಿ ಸುಮಾರು 11.30ಕ್ಕೆ ಕಮಲ್, ಬಬ್ಲಿಯನ್ನು ಭೇಟಿ ಆಗಿದ್ದನು ಎಂದು ಸೌರಭ್ ಹೇಳಿದ್ದಾರೆ.

ಮನೆಗೆ ಬಂದ ವೇಳೆ ಕಮಲ್ ಹಾಗೂ ಹರಿ ಓಂ ನಡುವೆ ಜಗಳವಾಗಿದೆ. ಆಗ ಹರಿ ಓಂ ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ವಿಚಾರಣೆ ವೇಳೆ ಬಬ್ಲಿ, ನಾನು ನನ್ನ ಇಬ್ಬರ ಮಕ್ಕಳ ಜೊತೆಯೇ ಕುಳಿತಿದೆ. ಆಗ ನನ್ನ ಪತಿ ಹಾಗೂ ಕಮಲ್ ನಡುವೆ ವಾದ ನಡೆಯುತ್ತಿತ್ತು. ನಾನು ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಆತನ ಜೊತೆ ಓಡಿ ಹೋದೆ ಎಂದು ಹೇಳಿದ್ದಾಳೆ.

Comments are closed.