ರಾಷ್ಟ್ರೀಯ

ಡಿಸೆಂಬರಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ

Pinterest LinkedIn Tumblr


ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಡಿಸೆಂಬರ್ 1 ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲದೇ ಇದ್ದರೆ ದುಬಾರಿ ದಂಡವನ್ನು ನೀವು ಪಾವತಿಸಬೇಕಾಗುತ್ತದೆ.

ದೇಶಾದ್ಯಂತ ಈ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳನ್ನು ಎಲ್ಲಾ ರಾಜ್ಯಗಳಿಗೂ ನಿಯೋಜಿಸುತ್ತಿದೆ. ಡಿಸೆಂಬರ್ 1ರಿಂದ ಟೋಲ್ ಪಾವತಿಗಳು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹದಡಿ ಫಾಸ್ಟ್ ಟ್ಯಾಗ್ ಮೂಲಕವೇ ನಡೆಯುತ್ತದೆ. ಫಾಸ್ಟ್ ಟ್ಯಾಗ್ ಕಡ್ಡಾಯವಾದರೂ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಒಂದು ಪ್ರವೇಶ ದ್ವಾರವನ್ನು ಹೈಬ್ರಿಡ್ ಆಗಿ ಬಳಸಲಾಗುತ್ತದೆ. ಇದರಲ್ಲಿ ಫಾಸ್ಟ್ ಟ್ಯಾಗ್ ಹಾಗೂ ಇತರೆ ವಿಧಾನದಲ್ಲೂ ಟೋಲ್ ಸ್ವೀಕರಿಸಲಾಗುತ್ತದೆ. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಡಿಸೆಂಬರ್ 1ರಿಂದ ಶೇ.100ರಷ್ಟು ಜಾರಿಯಾಗುತ್ತದೆ ಎಂದು ಹೆದ್ದಾರಿ ಸಚಿವಾಲಯ ಹೇಳಿದೆ.

ಏನಿದು ಫಾಸ್ಟ್ ಟ್ಯಾಗ್?
ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸೌಲಭ್ಯವನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿಸಬಹುದಾಗಿದೆ.

ಶುಲ್ಕ ಪಾವತಿ ಹೇಗೆ?
ರೇಡಿಯೋ-ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್(ಆರ್ ಎಫ್‍ಐಡಿ) ಆಧಾರಿತ ಫಾಸ್ಟ್ ಟ್ಯಾಗನ್ನು ವಾಹನದ ಮುಂಭಾಗದ ಗ್ಲಾಸ್‍ಗೆ ಅಂಟಿಸಲಾಗಿರುತ್ತದೆ. ಈ ಟ್ಯಾಗ್ ರೇಡಿಯೋ ಫ್ರಿಕ್ವೆನ್ಸಿ ಮೂಲಕ ಸ್ಕ್ಯಾನ್ ಆಗಲಿದ್ದು, ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗಲಿದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣವನ್ನು ಇಟ್ಟಿರಬೇಕಾಗುತ್ತದೆ.

ಎಲ್ಲ ಪ್ರಮುಖ ಬ್ಯಾಂಕುಗಳು ಫಾಸ್ಟ್ ಟ್ಯಾಗ್ ಸೌಲಭ್ಯ ನೀಡುತ್ತಿದ್ದು, ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತದೆ. ನೋಂದಾಯಿತ ವಾಹನ ಟೋಲ್ ಪ್ಲಾಜಾ ಮೂಲಕ ಹಾದು ಹೋಗುತ್ತಿದ್ದಂತೆ ಅಲ್ಲಿನ ರೀಡರ್, ಟ್ಯಾಗನ್ನು ರೀಡ್ ಮಾಡುತ್ತದೆ. ಆಗ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಆದರೆ ಖಾತೆಯಲ್ಲಿ ಮೊದಲೇ ಹಣ ಜಮೆಯಾಗಿರಬೇಕು. ಫಾಸ್ಟ್ ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ.

ಪ್ರಮುಖ ಬ್ಯಾಂಕುಗಳಾದ ಎಸ್‍ಬಿಐ, ಐಸಿಐಸಿಐ ಬ್ಯಾಂಕ್, ಎಚ್‍ಡಿಎಫ್‍ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕುಗಳು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್(ಎನ್‍ಇಟಿಸಿ)ಯ ಭಾಗವಾಗಿವೆ. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‍ಎಚ್‍ಎಐ) ಹಾಗೂ ಇಂಡಿಯನ್ ಹೈವೇಸ್ ಮ್ಯಾನೇಜ್‍ಮೆಂಟ್ ಕಂಪನಿ ಲಿಮಿಟೆಡ್(ಐಎಚ್‍ಎಂಸಿಎಲ್) ದ ಮಾರ್ಗಸೂಚಿಗಳ ಅಡಿಯಲ್ಲಿ ಬರುತ್ತದೆ.

ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್‍ಬಿಐ ಆರ್ ಎಫ್‍ಐಡಿ(ಫಾಸ್ಟ್ ಟ್ಯಾಗ್)ಗೆ 100 ರೂ.ಶುಲ್ಕವನ್ನು ವಿಧಿಸುತ್ತಿದೆ. ನೆಟ್ ಬ್ಯಾಂಕಿಂಗ್ ಮೂಲಕವೂ ನೀವು ಫಾಸ್ಟ್ ಟ್ಯಾಗಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಮಾತ್ರವಲ್ಲದೆ ಪೇಟಿಎಂ, ಏರ್ ಟೆಲ್ ಪೇಮೆಂಟ್ ಮೂಲಕ ಹಾಗೂ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಖರೀದಿಸಬಹುದಾಗಿದೆ.

ದರ ಹಾಗೂ ಕನಿಷ್ಟ ಬ್ಯಾಲೆನ್ಸ್ ಎಷ್ಟು?
ಫಾಸ್ಟ್ ಟ್ಯಾಗ್‍ನ ಬೆಲೆ 100 ರೂ.ಗಳಾಗಿದ್ದು, ಖರೀದಿ ವೇಳೆ 150-200 ರೂ. ಭದ್ರತಾ ಶುಲ್ಕ ಇಡಬೇಕು. ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಕನಿಷ್ಟ 100 ರೂ. ಮೊತ್ತ ಇರಬೇಕಾಗುತ್ತದೆ. ಈ ಫಾಸ್ಟ್ ಟ್ಯಾಗ್ ಮೂಲಕವೇ ಹೆದ್ದಾರಿ ಬಳಕೆದಾರರ ಶುಲ್ಕ ಪಾವತಿಯಾಗುತ್ತದೆ. ಪ್ರತಿ ಬಾರಿ ಪಾವತಿ ಮಾಡಿದಾಗ ಶೇ.2.5ರಷ್ಟು ಕ್ಯಾಶ್ ಬ್ಯಾಕ್ ದೊರೆಯಲಿದೆ. 2020ರ ಮಾರ್ಚ್ 31ರ ವರೆಗೆ ಈ ರಿಯಾಯಿತಿ ಸೌಲಭ್ಯ ಇರಲಿದೆ.

ಲಾಭ ಏನು?
ಈ ವ್ಯವಸ್ಥೆಯಿಂದಾಗಿ ಟೋಲ್ ಪ್ಲಾಜಾದಲ್ಲಿ ಕ್ಯೂ ನಿಲ್ಲುವುದು ತಪ್ಪುತ್ತದೆ. ಮಾತ್ರವಲ್ಲದೆ ಹೆದ್ದಾರಿಗಳಲ್ಲಿ ಸಂಭವಿಸುವ ಟ್ರಾಫಿಕ್ ಸಮಸ್ಯೆ ಸಹ ನಿವಾರಣೆಯಾಗಲಿದೆ ಎಂಬ ಉದ್ದೇಶದಿಂದ ಸರ್ಕಾರ ಈ ವ್ಯವಸ್ಥೆ ಜಾರಿಗೆ ತರುತ್ತಿದೆ.

ತೆರಿಗೆ ವಂಚನೆಗೆ ಕಡಿವಾಣ
ವಾಣಿಜ್ಯ ವಾಹನಗಳ ಫಾಸ್ಟ್ ಟ್ಯಾಗ್‍ಗೆ -ವೇ ಬಿಲ್ ಜೋಡಿಸಲಾಗಿರುತ್ತದೆ. ಇದರಿಂದ ವಾಣಿಜ್ಯ ವಾಹನಗಳು ಎಲ್ಲೆಲ್ಲಿ ಸಂಚರಿಸುತ್ತವೆ ಎಂಬುದರ ಬಗ್ಗೆ ನಿಗಾ ಇರಿಸಲು ಸಹಾಯವಾಗುತ್ತದೆ. ಇ-ವೇ ಬಿಲ್ ಅನ್ನು ಒಂದೇ ಬಾರಿ ಮಾತ್ರ ಬಳಸಬೇಕು. ಆದರೆ ಈಗ ಒಮ್ಮೆ ಬಿಲ್ ಪಡೆದು ಹಲವು ಬಾರಿ ಸಾಗಣೆ ಮಾಡಲಾಗುತ್ತಿದೆ. ಅಲ್ಲದೆ ಬಿಲ್ ನಲ್ಲಿ ಸೂಚಿಸಿರುವ ಸ್ಥಳಕ್ಕಿಂತ ಬೇರೆ ಸ್ಥಳಗಳಿಗೆ ಸಾಗಣಿ ಮಾಡಲಾಗುತ್ತಿದೆ. ಈ ಮೂಲಕ ತೆರಿಗೆ ಪಾವತಿ ತಪ್ಪಿಸಲಾಗುತ್ತಿದೆ. ಇದೀಗ ಫಾಸ್ಟ್ ಟ್ಯಾಗ್‍ಗೆ ಇ-ವೇ ಬಿಲ್ ಜೋಡಿಸುವುದರಿಂದ ತೆರಿಗೆ ವಂಚನೆಗೆ ಕಡಿವಾಣ ಹಾಕಬಹುದಾಗಿದೆ ಎಂದು ಸಾರಿಗೆ ಸಚಿವಾಲಯ ಹೇಳಿದೆ.

ಎಲ್ಲಿ ಪಡೆಯಬೇಕು, ಹೇಗೆ ಪಡೆಯಬೇಕು?
ಫಾಸ್ಟ್ ಟ್ಯಾಗನ್ನು ವಿವಿಧ ಬ್ಯಾಂಕುಗಳಲ್ಲಿ, ಐಎಚ್‍ಎಂಸಿಎಲ್, ಎನ್‍ಎಚ್‍ಎಐ, ಟೋಲ್ ಪ್ಲಾಜಾ, ಆರ್ ಟಿಓ ಕಚೇರಿ, ಟ್ರಾನ್ಸ್ ಪೋರ್ಟ್ ಕೇಂದ್ರಗಳು, ಕೆಲವು ಪೆಟ್ರೋಲ್ ಬಂಕ್‍ಗಳಲ್ಲಿ ಹಾಗೂ ವಿವಿಧೆಡೆ ಖರೀದಿಸಬಹುದಾಗಿದೆ. ಕಾರ್, ಜೀಪ್ ವ್ಯಾನ್‍ಗಳಿಗೆ ಅಮೇಜಾನ್‍ನಲ್ಲಿ ಹಾಗೂ ವೆಬ್‍ ಸೈಟಿಗೆ ಭೇಟಿ ನೀಡಿ ಖರೀದಿಸಬಹುದು. ಮಾತ್ರವಲ್ಲದೆ ಸದಸ್ಯತ್ವ ಹೊಂದಿದ ಬ್ಯಾಂಕುಗಳ ವೆಬ್‍ಸೈಟ್‍ನಲ್ಲಿ ಸಹ ಖರೀದಿಸಬಹುದು.

ಏನೇನು ದಾಖಲೆ ಬೇಕು?
ನೀವು ಎಸ್‍ಬಿಐ ಗ್ರಾಹಕರಾಗಿದ್ದರೆ www.fastag.onlinesbi.com ಭೇಟಿ ನೀಡಬಹುದು. ಬ್ಯಾಂಕ್ ಪಾಸ್ ಬುಕ್, ರಿಜಿಸ್ಟ್ರೇಶನ್ ಕಾರ್ಡ್ ದಾಖಲೆಗಳನ್ನು ನೀಡಬೇಕು. ಪರಿಶೀಲನೆಗಾಗಿ ಒರಿಜಿನಲ್ ದಾಖಲೆಗಳನ್ನು ಇಟ್ಟುಕೊಂಡು ಹೋಗಿ. ಅಲ್ಲದೆ ಇದನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಕೆವೈಸಿ(ನಿಮ್ಮ ಗ್ರಾಹಕರನ್ನು ಅರಿಯಿರಿ) ಹಾಗೂ ಫುಲ್ ಕೆವೈಸಿ ಎಂದು ಮಾಡಲಾಗಿದೆ. ಕೆವೈಸಿ ಫಾಸ್ಟ್ ಟ್ಯಾಗ್ ಖಾತೆಯಲ್ಲಿ 10,000 ಸಾವಿರಕ್ಕೂ ಹೆಚ್ಚು ಹಣ ಇಡುವಂತಿಲ್ಲ. ಅಲ್ಲದೆ ಪ್ರತಿ ತಿಂಗಳು 10 ಸಾವಿರಕ್ಕೂ ಅಧಿಕ ಹಣವನ್ನು ವರ್ಗಾಯಿಸುವಂತಿಲ್ಲ. ಇನ್ನು ಫುಲ್ ಕೆವೈಸಿ ಖಾತೆಯಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಇಡುವಂತಿಲ್ಲ.

ಫಾಸ್ಟ್ ಟ್ಯಾಗ್ ಟೈಂಲೈನ್:
2014ರಲ್ಲಿ ಮುಂಬೈ ಅಹಮದಾಬಾದ್ ಸುವರ್ಣ ಚತುಷ್ಪತ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಫಾಸ್ಟ್ ಟ್ಯಾಗ್ ಜಾರಿ ಆಗಿತ್ತು. 2016ರಲ್ಲಿ ದೇಶದ 247(ಶೇ.70) ಟೋಲ್ ಪ್ಲಾಜಾಗಳಲ್ಲಿ ಜಾರಿಗೆ ಬಂದಿತು. 2017ರ ನ.8 ರಂದು ಡಿಸೆಂಬರ್ ನಂತರ ಮಾರಾಟವಾಗುವ ಎಲ್ಲ ವಾಹನಗಳಲ್ಲಿ ಫಾಸ್ಟ್ ಕಡ್ಡಾಯವಾಗಿ ಇರಬೇಕೆಂದು ಆದೇಶ ಹೊರಡಿಸಲಾಯಿತು.

Comments are closed.