ರಾಷ್ಟ್ರೀಯ

ಭಾರತದ ಪ್ರಖ್ಯಾತ ಗಣಿತಜ್ಞ ವಶಿಷ್ಠ ನಾಯಾರಣ ಸಿಂಗ್​ ನಿಧನ

Pinterest LinkedIn Tumblr

ಪಟನಾ: ಜರ್ಮನಿ ಮೂಲದ ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್​ ಐನ್​ಸ್ಟೀನ್​ ಅವರ ಸಾಪೇಕ್ಷೆ ಸಿದ್ಧಾಂತಕ್ಕೆ ಸವಾಲು ಹಾಕಿದ್ದ ಭಾರತದ ಪ್ರಖ್ಯಾತ ಗಣಿತಜ್ಞ ವಶಿಷ್ಠ ನಾಯಾರಣ ಸಿಂಗ್​ (74) ಪಟನಾ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

1942ರ ಏಪ್ರಿಲ್​ 2ರಂದು ಜನಿಸಿದ್ದ ವಶಿಷ್ಠ ನಾರಾಯಣ ಅವಿಭಜಿತ ಬಿಹಾರದ ನೇತಾರತ್​ ಎಂಬಲ್ಲಿ ಜನಿಸಿದ್ದರು. ಅಲ್ಲಿಯೇ ಅವರು ಪ್ರಾಥಮಿಕ ಶಿಕ್ಷಣ ಪೂರೈಸಿ ಪಟನಾ ವಿಜ್ಞಾನ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದರು. 1965ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿದ ಅವರು 1969ರಲ್ಲಿ ಸೈಕಲ್​ ವೆಕ್ಟಾರ್​ ಸ್ಪೇಸ್​ ವಿಷಯವಾಗಿ ಪಿಎಚ್​.ಡಿ ಪಡೆದುಕೊಂಡಿದ್ದರು.
ಆನಂತರ ಕಾನ್ಪುರದ ಐಐಟಿಯಲ್ಲಿ ಹಾಗೂ ಕೋಲ್ಕತಾದ ಭಾರತೀಯ ಸಾಂಖ್ಯಿಕ ಸಂಸ್ಥೆಯಲ್ಲಿ (ಐಎಸ್‌ಐ) ಬೋಧನಾವೃತ್ತಿ ಕೈಗೊಂಡಿದ್ದರು. ಮಾಧೇಪುರದ ಬಿ.ಎನ್​. ಮಂಡಲ್​ ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಪ್ರೊಫೆಸರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಅಂದಾಜು 40 ವರ್ಷಗಳಿಂದ ಅವರು ಭ್ರಮಾಧೀನ ಕಾಯಿಲೆಗೆ (ಸ್ಕಿಜೋಫ್ರೇನಿಯಾ) ತುತ್ತಾಗಿದ್ದರು. ಹೀಗಿದ್ದರೂ ಅವರು ಐನ್​ಸ್ಟೀನ್​ ಅವರ ಸಾಪೇಕ್ಷ ಸಿದ್ಧಾಂತಕ್ಕೆ ಸವಾಲು ಹಾಕಿದ್ದರು.

ಭೋಜ್​ಪುರ ಜಿಲ್ಲೆಯ ಬಸ್ತಾನ್​ಪುರ್​ನಲ್ಲಿ ನೆಲೆಸಿದ್ದ ಅವರು ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಟನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ನಿಧನರಾದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಆಂಬುಲೆನ್ಸ್​ಗಾಗಿ ಕಾಯಬೇಕಾಯಿತು: ಪ್ರಖ್ಯಾತ ಗಣಿತಜ್ಞರಾಗಿದ್ದ ವಶಿಷ್ಠ ನಾರಾಯಣ ಸಿಂಗ್​ ಅವರ ನಿಧನದ ಬಳಿಕ ಅವರ ದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲು ಆಂಬುಲೆನ್ಸ್​ ದೊರೆಯದೆ ಕುಟುಂಬಸ್ಥರು ತೀವ್ರ ಪರದಾಡಿದರು. ಅದೆಷ್ಟೇ ಮನವಿ ಮಾಡಿಕೊಂಡರೂ ಆಸ್ಪತ್ರೆ ಆಡಳಿತ ಮಂಡಳಿ ಈ ಬಗ್ಗೆ ಗಮನಹರಿಸಲೇ ಇಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ಅಂದಾಜು 2 ಗಂಟೆಗಳ ಕಾಯುವಿಕೆಯ ಬಳಿಕ ಆಂಬುಲೆನ್ಸ್ ವ್ಯವಸ್ಥೆಯಾಗಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ನಿತೀಶ್​ ಶೋಕ: ಪ್ರಖ್ಯಾತ ಗಣಿತಜ್ಞ ವಶಿಷ್ಠ ನಾರಾಯಣ ಸಿಂಗ್​ ಅವರ ನಿಧನಕ್ಕೆ ಬಿಹಾರ ಸಿಎಂ ನಿತೀಶ್​ ಕುಮಾರ್​ ಶೋಕ ವ್ಯಕ್ತಪಡಿಸಿದ್ದಾರೆ.

Comments are closed.