ರಾಷ್ಟ್ರೀಯ

ಕುಡಿಯಲು ದುಡ್ಡಿಗಾಗಿ ಪೀಡಿಸುತ್ತಿದ್ದ ಪುತ್ರನನ್ನೇ ಜೀವಂತ ಸುಟ್ಟ ಹೆತ್ತವರು!

Pinterest LinkedIn Tumblr


ತೆಲಂಗಾಣ: ದಿನಂಪ್ರತಿ ಕುಡಿತಕ್ಕಾಗಿ ಹಣ ಕೊಡುವಂತೆ ಪೀಡಿಸುತ್ತಿದ್ದ ಮಗನನ್ನು ಪೋಷಕರೇ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟುಹಾಕಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.

ಕುಡಿತದ ಚಟಕ್ಕೆ ದಾಸನಾಗಿದ್ದ ಮಗ ಪ್ರತಿದಿನ ಹಣಕ್ಕಾಗಿ ತಂದೆ, ತಾಯಿಯನ್ನು ಪೀಡಿಸುತ್ತಿದ್ದ. ಇದರಿಂದ ರೋಸಿ ಹೋದ ತಂದೆ ಕೆ.ಪ್ರಭಾಕರ್, ತಾಯಿ ವಿಮಲಾ ಮಂಗಳವಾರ ರಾತ್ರಿ ಮಗ ಕೆ. ಮಹೇಶ್ ಚಂದ್ರನನ್ನು(42ವರ್ಷ) ಕಟ್ಟಿಹಾಕಿ, ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಟ್ಟು ಹಾಕಿರುವುದಾಗಿ ವರದಿ ತಿಳಿಸಿದೆ.

ಹೈದರಾಬಾದ್ ನಿಂದ 200 ಕಿಲೋ ಮೀಟರ್ ದೂರದಲ್ಲಿರುವ ವಾರಂಗಲ್ ಗ್ರಾಮಾಂತರ ಜಿಲ್ಲೆಯ ಮುಸ್ತ್ಯಾಲಾಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮಹೇಶ್ ವಿಪರೀತ ಕುಡಿತದ ಚಟಕ್ಕೆ ಬಲಿಬಿದ್ದು, ತಂದೆ, ತಾಯಿ ಹಾಗೂ ಪತ್ನಿಯನ್ನೂ ಹಿಂಸಿಸುತ್ತಿದ್ದ. ಆದರೆ ಎರಡು ತಿಂಗಳ ಹಿಂದೆ ಪತ್ನಿ ತನ್ನ ಪೋಷಕರ ಮನೆಗೆ ಹೊರಟು ಹೋಗಿದ್ದಳು. ನಂತರ ಹಣಕ್ಕಾಗಿ ಪೋಷಕರನ್ನು ಪೀಡಿಸಲು ಆರಂಭಿಸಿದ್ದ. ಕೆಲವೊಮ್ಮೆ ಪೋಷಕರಿಗೂ ಹೊಡೆಯುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದದಾರೆ.

ಮಹೇಶ್ ದಂಪತಿ ಇಬ್ಬರು (ಗಂಡು, ಹೆಣ್ಣು) ಮಕ್ಕಳಿದ್ದಾರೆ. ಮಂಗಳವಾರ ರಾತ್ರಿ ಮಹೇಶ್ ಕುಡಿದು ಬಂದು ತಂದೆ, ತಾಯಿಯನ್ನು ಥಳಿಸಲಾರಂಭಿಸಿದ್ದ. ಇದರಿಂದ ರೋಸಿ ಹೋದ ಪೋಷಕರು ಮಗನನ್ನು ಕಂಬಕ್ಕೆ ಕಟ್ಟಿ ಹಾಕಿ, ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟುಹಾಕಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಹೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಈತ ವಾರಂಗಲ್ ಕೃಷಿ ಮಾರುಕಟ್ಟೆಯಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಮಹೇಶ್ ತಂದೆ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.