ರಾಷ್ಟ್ರೀಯ

ಶಿವಸೇನೆ – ಎನ್.ಸಿ.ಪಿ. ಸರಕಾರ : ಪವಾರ್ ಸುಳಿವು

Pinterest LinkedIn Tumblr


ಮುಂಬೈ: ವಾಣಿಜ್ಯ ನಗರಿ ಮಾಹಾರಾಷ್ಟ್ರದಲ್ಲಿ ನೂತನ ಸರಕಾರ ರಚನೆಯ ಬಿಕ್ಕಟ್ಟು ಮುಂದುವರಿದಿದ್ದು ಹೊಸ ಬೆಳವಣಿಗೆಯಲ್ಲಿ ತನ್ನ ದೀರ್ಘಕಾಲದ ರಾಜಕೀಯ ಮಿತ್ರಪಕ್ಷವಾಗಿರುವ ಬಿಜೆಪಿಗೆ ಕೈಕೊಟ್ಟು ಶಿವಸೇನೆ ಸರಕಾರ ರಚಿಸುವ ಸಾಧ್ಯತೆ ದಟ್ಟವಾಗುತ್ತಿದೆ.

ಇದಕ್ಕೆ ಇಂಬು ನೀಡುವಂತೆ ಎನ್.ಸಿ,ಪಿ, ನಾಯಕರು ನೀಡುತ್ತಿರುವ ಹೇಳಿಕೆಗಳು ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರಕಾರದ ಬದಲಿಗೆ ಶಿವಸೇನೆಯೇ ಇತರರ ಬೆಂಬಲದೊಂದಿಗೆ ಸರಕಾರ ರಚಿಸಲಿದೆಯೇ ಎಂಬ ಸಂದೇಹವೂ ಇದೀಗ ರಾಜಕೀಯ ವಲಯದಲ್ಲಿ ಬಲವಾಗುತ್ತಿದೆ.

‘ಛತ್ರಪತಿ ಶಿವಾಜಿ ಮಹಾರಾಜರ ಪರಿಕಲ್ಪನೆಯಾಗಿದ್ದ ‘ಜನ ಸರಕಾರ’ವನ್ನು ರೂಪಿಸುವ ಇರಾದೆಯೊಂದಿಗೆ ಶಿವಸೇನಾ ನಾಯಕರು ಎನ್.ಸಿ.ಪಿ. ಬೆಂಬಲವನ್ನು ಯಾಚಿಸಿದ ಪಕ್ಷದಲ್ಲಿ ಸರಕಾರ ರಚನೆಯಲ್ಲಿ ಭಾಗಿಯಾಗಲು ಪಕ್ಷದ ನಾಯಕ ಶರದ್ ಪವಾರ್ ಅವರು ತಮ್ಮ ಒಪ್ಪಿಗೆಯನ್ನು ಸೂಚಿಸಲಿದ್ದಾರೆ’ ಎಂದು ಎನ್.ಸಿ.ಪಿ. ಪಕ್ಷದ ಮಾಧ್ಯಮ ವಕ್ತಾರ ನವಾಬ್ ಮಲಿಕ್ ಅವರು ಹೇಳಿರುವುದು ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರಕಾರ ಅಸ್ತಿತ್ವಕ್ಕೆ ಬರುವ ಸುಳಿವನ್ನು ನೀಡಿದೆ.

‘ಮಹಾರಾಷ್ಟ್ರದ ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಶಿವಸೇನಾ ನಾಯಕ ಉದ್ಭವ್ ಠಾಕ್ರೆ ಅವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ ಅವರಿಗೆ ಉತ್ತಮ ಬದಲೀ ಆಯ್ಕೆಗಳು ಲಭಿಸಲಿವೆ’ ಎಂಬ ಮಾತನ್ನೂ ಸಹ ನವಾಬ್ ಮಲಿಕ್ ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಜನತೆ ತಮ್ಮ ಪಕ್ಷಕ್ಕೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಜನಾದೇಶವನ್ನು ನೀಡಿದ್ದಾರೆ ಹಾಗಾಗಿ ಎನ್.ಸಿ.ಪಿ. ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲಿದೆ ಎಂಬ ಮಾತನ್ನು ಎನ್.ಸಿ.ಪಿ. ನಾಯಕ ಶರದ್ ಪವಾರ್ ಅವರು ಶುಕ್ರವಾರವಷ್ಟೇ ಹೇಳಿದ್ದರು. ಆದರೆ ಅದಾದ ಒಂದು ದಿನದ ಬಳಿಕ ಪಕ್ಷದ ವಕ್ತಾರರಿಂದ ಸಂಪೂರ್ಣ ಭಿನ್ನ ಹೇಳಿಕೆ ಬಂದಿರುವುದು ರಾಜಕೀಯ ಪಡಸಾಲೆಯಲ್ಲಿ ವಿವಿಧ ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ.

288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 145 ಸ್ಥಾನಗಳ ಅಗತ್ಯವಿದೆ. ಸದ್ಯಕ್ಕೆ 105 ಸ್ಥಾನಗಳನ್ನು ಗೆದ್ದುಕೊಂಡಿರುವ ಭಾರತೀಯ ಜನತಾ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ 56 ಸ್ಥಾನಗಳನ್ನು ಗೆದ್ದುಕೊಂಡು ನಂತರದ ಸ್ಥಾನದಲ್ಲಿದೆ. ಒಟ್ಟು 162 ಸ್ಥಾನಗಳನ್ನು ಹೊಂದಿರುವ ಈ ಎರಡೂ ಪಕ್ಷಗಳ ನಡುವೆ ಅಧಿಕಾರ ಸೂತ್ರ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಮೂಡಿರುವುದು ಸದ್ಯ ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚನೆಯ ಗೊಂದಲಕ್ಕೆ ಕಾರಣವಾಗಿದೆ.

ಇದೀಗ ತನ್ನ ರಾಜಕೀಯ ಮಿತ್ರ ಬಿಜೆಪಿಯನ್ನು ಹೊರಗಿರಿಸಿ ಸರಕಾರ ರಚಿಸಬೇಕಾದರೆ ಶಿವಸೇನೆಗೆ ಎನ್.ಸಿ.ಪಿ. ಬೆಂಬಲ ಮಾತ್ರವೇ ಸಾಕಾಗುವುದಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ ಬೆಂಬಲವೂ ಅಗತ್ಯವಾಗಿರುತ್ತದೆ. ಶಿವಸೇನೆ, ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಕೈಜೋಡಿಸಿದರೆ ಆಗ ಈ ಮೂರೂ ಪಕ್ಷಗಳ ಬಲಾಬಲ 154 ಆಗಲಿದೆ.

ಒಂದುವೇಳೆ ಶಿವಸೇನೆಗೆ ಎನ್.ಸಿ.ಪಿ. ಬೆಂಬಲ ನೀಡಿದರೆ ಈ ಎರಡು ಪಕ್ಷಗಳ ಬಲಾಬಲ 110 ಆಗಲಿದ್ದು ಆಗ ಬಹುಮತಕ್ಕೆ 35 ಸ್ಥಾನಗಳ ಕೊರತೆ ಎದುರಾಗಲಿದೆ. 13ಜನ ಪಕ್ಷೇತರರು, ಬಹುಜನ ವಿಕಾಸ್ ಅಘಾಡಿ ಪಕ್ಷದ 02 ಶಾಸಕರು ಮತ್ತು ಪಿಜೆಪಿ ಪಕ್ಷದ ಇಬ್ಬರು ಶಾಸಕರ ಬೆಂಬಲ ಲಭಿಸಿದರೂ ಒಟ್ಟು ಬಲಾಬಲ 127 ಮಾತ್ರವೇ ಆಗಲಿದ್ದು ಬಹುಮತಕ್ಕೆ 18 ಸ್ಥಾನಗಳು ಕಡಿಮೆ ಬೀಳಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ತೀರ್ಮಾನವೇ ಇಲ್ಲಿ ನಿರ್ಣಾಯಕವಾಗಲಿದೆ.

Comments are closed.