ರಾಷ್ಟ್ರೀಯ

ಶಿವಸೇನೆಗೆ ಬೆಂಬಲ ನೀಡುವ ಮಾತೇ ಇಲ್ಲ: ಸೋನಿಯಾ ಗಾಂಧಿ

Pinterest LinkedIn Tumblr


ನವದೆಹಲಿ(ನ.02): ಮಹಾರಾಷ್ಟ್ರದಲ್ಲಿ ಉದ್ಧವ್​​ ಠಾಕ್ರೆ ನೇತೃತ್ವದ ಶಿವಸೇನೆಗೆ ಬೆಂಬಲ ನೀಡುವ ಮಾತೇ ಇಲ್ಲ ಎಂದು ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಜತೆ ಸರ್ಕಾರ ರಚನೆಗೆ ಮುಂದಾಗದ ಶಿವಸೇನೆಗೆ ಕಾಂಗ್ರೆಸ್​​ ನೇತೃತ್ವದ ಎನ್​​​ಸಿಪಿ ಮೈತ್ರಿ ಬೆಂಬಲ ನೀಡಲಿದೆ ಎನ್ನಲಾಗಿತ್ತು. ಈ ಬೆನ್ನಲ್ಲೀಗ ಸೋನಿಯಾ ಗಾಂಧಿ ಶಿವಸೇನೆಗೆ ಕಾಂಗ್ರೆಸ್​ ಬೆಂಬಲ ಸಾಧ್ಯವಿಲ್ಲ ಎಂದಿದ್ದಾರೆ.

ಶಿವಸೇನೆ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚಿಸಬಹುದು ಎಂದು ಮಹಾರಾಷ್ಟ್ರದ ಕೆಲವು ಕಾಂಗ್ರೆಸ್​ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಶಿವಸೇನೆ ಜತೆಗಿನ ಮೈತ್ರಿ ಬಗ್ಗೆ ಸೋನಿಯಾ ಗಾಂಧಿ ಸ್ಥಳೀಯ ಕಾಂಗ್ರೆಸ್​​ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್​​ನ ವಿರುದ್ಧ ನಿಲುವು ಹೊಂದಿರುವ; ಬಿಜೆಪಿಯೊಂದಿಗೆ ಚುನಾವಣಾಪೂರ್ಣ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಮಹಾರಾಷ್ಟ್ರದ ಕಾಂಗ್ರೆಸ್​​ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ನೇತೃತ್ವದ ತಂಡ ಸೋನಿಯಾ ಗಾಂಧಿಯವರ ಮುಂದೆ ಶಿವಸೇನೆ ಜತೆಗಿನ ಮೈತ್ರಿ ಪ್ರಸ್ತಾಪ ಮಾಡಿದೆ. ಬಾಳಾಸಾಹೇಬ್​​​​ ಥೋರಟ್​​ ಜತೆಗೆ ಮಾಜಿ ಸಿಎಂ ಅಶೋಕ್ ಚೌಹಾಣ್, ವಿಜಯ್ ವಡೇಟ್ಟಿವಾರ್ ಮತ್ತು ಮಣಿಕ್‌ರಾವ್ ಠಾಕ್ರೆ ಕಾಂಗ್ರೆಸ್​ ಹೈಕಮಾಂಡ್​​ ಜತೆ ಮಾತುಕತೆ ನಡೆಸಿದ್ಧಾರೆ. ಈ ವೇಳೆ ಸೋನಿಯಾ ಗಾಂಧಿ ಶಿವಸೇನೆ ಜತೆ ಮೈತ್ರಿ ಆಗುವುದಿಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ.

ಈಗಾಗಲೇ ಎನ್​​ಸಿಪಿ ಮುಖ್ಯಸ್ಥ ಶರಾದ್​ ಪವಾರ್​​ ಕೂಡ ಶಿವಸೇನೆಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬೆನ್ನಲ್ಲೇ ಶಿವಸೇನೆಗೆ ಕಾಂಗ್ರೆಸ್​​ ಬೆಂಬಲ ಸಾಧ್ಯವಿಲ್ಲ ಎಂಬ ಸೋನಿಯಾ ಗಾಂಧಿ ಸಂದೇಶ ಉದ್ದವ್ ಠಾಕ್ರೆ ಕನಸಿಗೆ ತಣ್ಣೀರೆರಚಿದಂತಾಗಿದೆ.

ಮಹಾರಾಷ್ಟ್ರದಲ್ಲಿ ಸುಲಭವಾಗಿ ಸರ್ಕಾರ ರಚಿಸಬಹುದು ಎಂಬ ಬಿಜೆಪಿ ನಿರೀಕ್ಷೆ ಸುಳ್ಳಾಗಿದೆ. ಇತ್ತ 50:50 ಸೂತ್ರಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸರ್ಕಾರ ರಚನೆ ಮಾಡಲು ಬೆಂಬಲ ನೀಡುವುದಾಗಿ ಶಿವಸೇನೆ ಹೊಸ ದಾಳ ಉರುಳಿಸಿದೆ. ಈ ಸೂತ್ರದ ಪ್ರಕಾರ 5 ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ಇಬ್ಬರು ಉಖ್ಯಮಂತ್ರಿಗಳನ್ನು ಮಾಡಬೇಕಾಗುತ್ತದೆ. ಅಂತೆಯೇ ಎರಡೂವರೆ ವರ್ಷ ಶಿವಸೇನೆ ಅಭ್ಯರ್ಥಿ ಸಿಎಂ ಆದರೆ, ಇನ್ನುಳಿದ ಅವಧಿಗೆ ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಆಗಬಹುದಾಗಿದೆ.

ಆರಂಭದಿಂದಲೂ ಸಿಎಂ ಹುದ್ದೆ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಶಿವಸೇನೆಯೀಗ, ಇಂತಹ ಬೇಡಿಕೆಯಿಟ್ಟಿದೆ. ಶಿವಸೇನಯಿಂದ ಆದಿತ್ಯ ಠಾಕ್ರೆ ಸಿಎಂ ಸ್ಥಾನಕ್ಕೆ ಯತ್ನಿಸುತ್ತಿದ್ದರೆ, ಅತ್ತ ಬಿಜೆಪಿಯಿಂದಹಾಲಿ ಸಿಎಂ ದೇವೇಂದ್ರ ಫಡ್ನವಿಸ್ ಮತ್ತೆ ತಮ್ಮ ಸ್ಥಾನದಲ್ಲೇ ಮುಂದುವರೆಯಲು ಸಜ್ಜಾಗಿದ್ದಾರೆ. ಆದರೀಗ ಶಿವಸೇನೆ ಆಗ್ರಹದಿಂದ ಬಿಜೆಪಿಗೆ ಸರ್ಕಾರ ರಚಿಸುವುದು ಕಷ್ಟವಾಗಿದೆ.

ಈ ಮಧ್ಯೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಾಗ 2.5 ವರ್ಷ ಸಿಎಂ ಹುದ್ದೆ ನೀಡುತ್ತೇವೆಂದು ಶಿವಸೇನೆಗೆ ಮಾತು ಕೊಟ್ಟಿರಲಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಹೇಳಿದ್ದಾರೆ. ಅಲ್ಲದೇ ಶಿವಸೇನೆ ದೇವೇಂದ್ರ ಫಡ್ನವೀಸ್​ ಹೇಳಿಕೆ ತಿರುಗೇಟು ನೀಡಿದೆ. ಲೋಕಸಭಾ ಚುನಾವಣೆಗೆ ಮುನ್ನ 50:50 ಸೂತ್ರ ಅನುಸರಿಸೋಣ ಎಂದು ಖುದ್ದು ಸಿಎಂ ಫಡ್ನವೀಸ್ ಮಾತು ಕೊಟ್ಟಿದ್ದರು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ ತಪರಾಕಿ ಬಾರಿಸಿದ್ದಾರೆ.

Comments are closed.