ರಾಷ್ಟ್ರೀಯ

2 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಮೌನವೇಕೆ?

Pinterest LinkedIn Tumblr


ನವದೆಹಲಿ:ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಎರಡೂ ರಾಜ್ಯಗಳ ಫಲಿತಾಂಶ ರಾಷ್ಟ್ರರಾಜಕಾರಣದಲ್ಲಿ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಎಲ್ಲರೂ ಪ್ರತಿಕ್ರಿಯೆ ನೀಡಿದ್ದಾರೆ, ಆದರೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಮಾತ್ರ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ.

ಹರ್ಯಾಣದಲ್ಲಿ ಕಾಂಗ್ರೆಸ್ ಉತ್ತಮ ಬೆಳವಣಿಗೆ ಕಂಡಿದೆ. ಹರ್ಯಾಣ ವಿಧಾನಸಭೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನಾ ಮೈತ್ರಿ ಅಧಿಕಾರದ ಗದ್ದುಗೆ ಏರುವಂತಾಗಿದೆ. ಅಲ್ಲದೇ ಮಹಾರಾಷ್ಟ್ರದಲ್ಲಿಯೂ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಗಿಂತ ಹೆಚ್ಚು ಸ್ಥಾನ ಗಳಿಸಿದೆ.

ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ ಜತೆ ಸೋನಿಯಾ ಗಾಂಧಿ ಮಾತುಕತೆ ನಡೆಸಿದ್ದಾರೆ. ಹರ್ಯಾಣ ಫಲಿತಾಂಶದ ಬಗ್ಗೆ ಪ್ರಿಯಾಂಕಾ ಗಾಂಧಿ ಕೂಡಾ ರಾಯ್ ಬರೇಲಿಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲದಿರುವುದು ಕಾಂಗ್ರೆಸ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಟ್ವೀಟರ್ ಖಾತೆಯಲ್ಲಿಯೂ ಯಾವುದೇ ಪೋಸ್ಟ್ ಹಾಕಿಲ್ಲ. ಎಂಟಿಎನ್ ಎಲ್ ಮತ್ತು ಬಿಎಸ್ ಎನ್ ಎಲ್ ವಿಲೀನದ ಕುರಿತು ಅಕ್ಟೋಬರ್ 23ರಂದು ರಾಹುಲ್ ಕೊನೆಯದಾಗಿ ಟ್ವೀಟ್ ಮಾಡಿದ್ದಾರೆ. ಗುರುವಾರ ಸಂಜೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ರಾಹುಲ್ ಫಲಿತಾಂಶದ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಡಿಕೆ ಶಿವಕುಮಾರ್ ಅವರನ್ನೂ ರಾಹುಲ್ ಭೇಟಿಯಾಗಿದ್ದರು.

Comments are closed.