ರಾಷ್ಟ್ರೀಯ

ಡಾರ್ಜಿಲಿಂಗ್​ ಬೆಟ್ಟದ ರಸ್ತೆಯಲ್ಲಿ 10 ಕಿ.ಮೀ ಓಡಾಡಿದ ಮಮತಾ ಬ್ಯಾನರ್ಜಿ!

Pinterest LinkedIn Tumblr


ಡಾರ್ಜಿಲಿಂಗ್​: ಪ್ರತಿದಿನ ಬೆಳಗ್ಗೆ ವ್ಯಾಯಾಮದ ಭಾಗವಾಗಿ ಟ್ರೇಡ್​ಮಿಲ್​ ಮೇಲೆ ನಡೆಯುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದೇ ಮೊದಲ ಬಾರಿಗೆ ಡಾರ್ಜಿಲಿಂಗ್​ ಬೆಟ್ಟಗಳ ನಡುವಿನ ರಸ್ತೆಯಲ್ಲಿ ಜಾಗಿಂಗ್​ ಮಾಡುತ್ತಾ ಕಾಣಿಸಿಕೊಂಡರು. ಪರಿಸರ ಸಂರಕ್ಷಣೆ ಅರಿವು ಮೂಡಿಸಲು ಅಧಿಕಾರಿಗಳು ಮತ್ತು ಪತ್ರಕರ್ತರೊಂದಿಗೆ ಡಾರ್ಜಿಲಿಂಗ್​ ಬೆಟ್ಟದ ರಸ್ತೆಯಲ್ಲಿ ಗುರುವಾರ ಸುಮಾರು 10 ಕಿ.ಮೀ. ಜಾಗಿಂಗ್​ ಮಾಡಿದ್ದಾರೆ.

ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೇ ಜಾಗಿಂಗ್​ ಮಾಡುವ ಮೂಲಕ ಅಭಿಯಾನದಲ್ಲಿ ನಿರತರಾಗಿದ್ದರು.​ ಕುರ್ಸೆಯೊಂಗ್​ ಮತ್ತು ಮಹಾನದಿ ನಡುವಿನ 5 ಕಿ.ಮೀ ಅಂತರದ ಬೆಟ್ಟದ ರಸ್ತೆಯಲ್ಲಿ ಒಮ್ಮೆ ಮೇಲ್ಮುಖವಾಗಿ, ಮತ್ತೊಮ್ಮೆ ಇಳಿಮುಖವಾಗಿ ಜಾಗಿಂಗ್ ಮಾಡುತ್ತಾ ಅರಿವು ಮೂಡಿಸಿದರು.​ ಅಂತಾರಾಷ್ಟ್ರೀಯ ಹವಾಮಾನ ಕ್ರಿಯಾ ದಿನ(ಅಕ್ಟೋಬರ್​ 24)ದ ಅಂಗವಾಗಿ ಈ ಅಭಿಯಾನವನ್ನು ಕೈಗೊಳ್ಳಲಾಗಿತ್ತು.

ತಮ್ಮ ಅಭಿಯಾನ ಸಂದರ್ಭದಲ್ಲಿ ದಾರಿ ನಡುವೆ ಮಕ್ಕಳು ಮತ್ತು ಸ್ಥಳೀಯರೊಂದಿಗೆ ಮಮತಾ ಅವರು ಮಾತುಕತೆ ನಡೆಸಿದರು. ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿ, ಹಸಿರಿನ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಇದಕ್ಕೂ ಮುಂಚೆ ಬೆಳಗ್ಗೆ ಟ್ವೀಟ್​ ಮಾಡಿ ಪರಿಸರ ಸಂರಕ್ಷಿಸುವಂತೆ ಕರೆ ನೀಡಿದ್ದರು.

ಪರಿಸರ ಸಂರಕ್ಷಣೆಯ ಮೂಲಕ ನಮ್ಮ ಗ್ರಹವನ್ನು ಸಂರಕ್ಷಿಸೋಣ, ಹಸಿರು ಕಾಪಾಡಿ, ಪರಿಸರವನ್ನು ಸ್ವಚ್ಛವಾಗಿಡೋಣ ಎಂದು ಅಂತಾರಾಷ್ಟ್ರೀಯ ಹವಾಮಾನ ಕ್ರಿಯಾ ದಿನದ ಅಂಗವಾಗಿ ನಾವೆಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ ಎಂದು ಹೇಳಿ ಮಮತಾ ಅವರು ಟ್ವೀಟ್​ ಮೂಲಕ ಕರೆ ನೀಡಿದರು.

ಅಭಿಯಾನ ಮುಗಿಸಿ ಗುರುವಾರ ಸಂಜೆ ಡಾರ್ಜಿಲಿಂಗ್​ನಿಂದ ಕೋಲ್ಕತಗೆ ವಾಪಾಸ್ಸಾದರು

Comments are closed.