ರಾಷ್ಟ್ರೀಯ

ಪ್ರೀ ಸ್ಕೂಲ್‌ ಶಿಕ್ಷಣಕ್ಕಾಗಿ ಮಾರ್ಗಸೂಚಿ ಸಿದ್ಧಪಡಿಸಿದ ಎನ್‌ಸಿಇಆರ್‌ಟಿ

Pinterest LinkedIn Tumblr

ನವದೆಹಲಿ (pti): ‘ಪ್ರೀ ಸ್ಕೂಲ್‌ ಮಕ್ಕಳಿಗೆ ಯಾವುದೇ ಲಿಖಿತ ಅಥವಾ ಮೌಖಿಕ ಪರೀಕ್ಷೆ ನಡೆಸಬಾರದು’ ಎಂದು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ತಿಳಿಸಿದೆ.

ಇದು ಪೋಷಕರ ಆಕಾಂಕ್ಷೆಯಿಂದ ಬೆಳೆದಿರುವ ಹಾನಿಕಾರಕ ಮತ್ತು ಅನಪೇಕ್ಷಿತ ಅಭ್ಯಾಸ. ಪ್ರೀ ಸ್ಕೂಲ್‌ ಹಂತದಲ್ಲಿ ಮೌಲ್ಯಮಾಪನ ಉದ್ದೇಶವು ಮಗುವನ್ನು ಪಾಸ್‌ ಅಥವಾ ಫೇಲ್‌ ಎಂದು ಹಣೆಪಟ್ಟಿ ಅಂಟಿಸುವುದಲ್ಲ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

ಪ್ರೀ ಸ್ಕೂಲ್‌ ಶಿಕ್ಷಣಕ್ಕಾಗಿ ಎನ್‌ಸಿಇಆರ್‌ಟಿ ಮಾರ್ಗಸೂಚಿ ಸಿದ್ಧಪಡಿಸಿದೆ. ಇದರಲ್ಲಿ ಮೌಲ್ಯಮಾಪವನ್ನು ಹೇಗೆ ವರದಿ ಮಾಡಬೇಕು?ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ತಿಳಿಸಲಾಗಿದೆ.

ಪ್ರಸ್ತುತ ಪ್ರೀ ಸ್ಕೂಲ್‌ನಲ್ಲಿ ಮಂದ ಮತ್ತು ಏಕತಾನತೆ ದಿನಚರಿ ಇದೆ. ಇದರಿಂದ ಮಕ್ಕಳು ಔಪಚಾರಿಕ ಶಿಕ್ಷಣಕ್ಕೆ ಒಡ್ಡಿಕೊಳ್ಳುತ್ತಾರೆ. ಪಠ್ಯಪುಸ್ತಕದ ಓದು ಮತ್ತು ಹೋಂವರ್ಕ್‌ ಮಾಡುವುದಕ್ಕಷ್ಟೆ ಆದ್ಯತೆ ನೀಡಲಾಗಿದೆ. ಈ ಮೂಲಕ ಮಕ್ಕಳ ಆಟವಾಡುವ ಹಕ್ಕನ್ನೇ ಕಸಿಯಲಾಗಿದೆ. ಇದೊಂದು ಅಪಾಯಕಾರಿ ಬೆಳವಣಿಗೆ ಎಂದು ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.

ಮಕ್ಕಳ ಸೃಜನಶೀಲತೆಯನ್ನು ಪ್ರೋತ್ಸಾಹಿಸಬೇಕು. ವಿಭಿನ್ನ ತಂತ್ರ ಮತ್ತು ವಿಧಾನಗಳ ಮೂಲಕ ಅವರ ಗ್ರಹಿಕಾ ಶಕ್ತಿ ವೃದ್ಧಿಸುವಂತಹ ಶಿಕ್ಷಣ ನೀಡಬೇಕು. ಮಕ್ಕಳು ಎಲ್ಲಿ ಹೇಗೆ ಹೆಚ್ಚು ಹೊತ್ತು ಕಳೆಯುತ್ತಾರೆ. ಅವರ ಸಾಮಾಜಿಕ ಸಂಬಂಧ, ಭಾಷೆಯ ಬಳಕೆ ಮತ್ತು ಮಕ್ಕಳ ಆರೋಗ್ಯ ಕುರಿತು ಶಿಕ್ಷಕರು ಗ್ರಹಿಸಿ ಸಂಕ್ಷಿಪ್ತ ಲಿಖಿತ ಟಿಪ್ಪಣಿಗಳನ್ನು ಸಿದ್ಧಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ

ಪ್ರತಿ ಮಗುವಿನ ಮಾಹಿತಿ ಮಕ್ಕಳು ಮತ್ತು ಪೋಷಕರು ವೀಕ್ಷಿಸಲು ಲಭ್ಯವಿರಬೇಕು. ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ, ಪೋಷಕರು ಮಕ್ಕಳ ಲಿಖಿತ ಮತ್ತು ಮೌಖಿಕ ಪ್ರಗತಿಯ ಸಾರಂಶದ ವರದಿಯನ್ನು ಪಡೆಯಬೇಕು ಎಂದು ತಿಳಿಸಲಾಗಿದೆ.

ಪ್ರೀ ಸ್ಕೂಲ್‌ ಸಿಬ್ಬಂದಿಗೆ ನೀಡಬೇಕಾದ ಮೂಲಸೌಕರ್ಯ, ಅರ್ಹತೆ ಮತ್ತು ಸಂಬಳವನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪ್ರವೇಶ ಪ್ರಕ್ರಿಯೆ, ದಾಖಲೆ ಮತ್ತು ವರದಿಗಳ ನಿರ್ವಹಣೆ ಜೊತೆಗೆ ಸಮುದಾಯದ ಮತ್ತು ಪೋಷಕರ ಜತೆಗಿನ ಸಮನ್ವಯತೆ ಪ್ರಾಮುಖ್ಯವನ್ನು ತಿಳಿಸಲಾಗಿದೆ.

Comments are closed.