ರಾಷ್ಟ್ರೀಯ

ಪ್ಲಾಸ್ಟಿಕ್‌ ತಿನ್ನುವ ಬ್ಯಾಕ್ಟಿರೀಯಾಗಳನ್ನು ಪತ್ತೆ ಮಾಡಿದ ಭಾರತೀಯ ವಿಜ್ಞಾನಿಗಳು

Pinterest LinkedIn Tumblr


ಹೊಸದಿಲ್ಲಿ: ಇಡೀ ವಿಶ್ವವನ್ನೇ ಕಂಗೆಡಿಸಿರುವ ಪ್ಲಾಸ್ಟಿಕ್‌ ಎಂಬ ಆಧುನಿಕ ರಾಕ್ಷಸನ ನಿಯಂತ್ರಣ ಮತ್ತು ನಿರ್ಮೂಲನೆಗೆ ಜಗತ್ತಿನಾದ್ಯಂತ ವಿಭಿನ್ನ ಪ್ರಯತ್ನಗಳು ಹಾಗೂ ಅಭಿಯಾನಗಳು ನಡೆಯುತ್ತಲೇ ಇವೆ. ಇಷ್ಟೆಲ್ಲಾ ಆದರೂ ಪ್ಲಾಸ್ಟಿಕ್ ಸಮಸ್ಯೆಗೊಂದು ಮುಕ್ತಿಯೇ ಸಿಕ್ಕಿಲ್ಲ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲೊಂದು ಶುಭ ಸಮಾಚಾರ ಸಿಕ್ಕಿದೆ.

ಪ್ಲಾಸ್ಟಿಕ್ ಎಂಬ ವಿಷಮಾರಿಯನ್ನು ತಿಂದು ಜೀರ್ಣೀಸಿಕೊಳ್ಳಬಹುದಾಗಿರುವ ಎರಡು ಬ್ಯಾಕ್ಟಿರಿಯಾ ತಳಿಗಳು ಗ್ರೇಟರ್ ನೋಯ್ಡಾದ ಜೌಗು ನೆಲದಲ್ಲಿ ಪತ್ತೆಯಾಗಿದೆ. ಗ್ರೇಟರ್‌ ನೋಯಿಡಾದ ಶಿವ ನಾಡಾರ್‌ ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಸಂಶೋಧಕರ ತಂಡವೊಂದು ಈ ಬ್ಯಾಕ್ಟೀರಿಯಾ ತಳಿಗಳನ್ನು ಪತ್ತೆ ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಒಂದು ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ ವಸ್ತುಗಳಲ್ಲಿರುವ ಪ್ರಮುಖ ಅಂಶವಾಗಿರುವ ಪಾಲಿಸ್ಟಿರೇನ್ ಅನ್ನು ವಿಭಜಿಸುವ ಸಾಮರ್ಥ್ಯವನ್ನು ಈ ಬ್ಯಾಕ್ಟೀರಿಯಾಗಳು ಹೊಂದಿವೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ವಿಶ್ವವಿದ್ಯಾನಿಲಯದ ಸಮೀಪದಲ್ಲೇ ಇರುವ ಜೌಗು ಪ್ರದೇಶದಲ್ಲಿ ಪತ್ತೆಯಾಗಿರುವ ಈ ಬ್ಯಾಕ್ಟೀರಿಯಾಗಳ ಎರಡು ತಳಿಗಳಿಗೆ ಇಲ್ಲಿನ ವಿಜ್ಞಾನಿಗಳು ಎಕ್ಸಿಗ್ಯೂಬ್ಯಾಕ್ಟೀರಿಯಂ ಸಿಬಿರಿಕಂ ಸ್ಟ್ರೈನ್ ಡಿ.ಆರ್.11 ಮತ್ತು ಎಕ್ಸಿಗ್ಯೂಬ್ಯಾಕ್ಟೀರಿಯಂ ಅನ್ ಡ್ಯಾ ಸ್ಟ್ರೈನ್ ಡಿ.ಆರ್.14 ಎಂದು ಹೆಸರನ್ನಿರಿಸಿದ್ದಾರೆ.

ಪಾಲಿಸ್ಟಿರೇನ್ ನಲ್ಲಿ ಅಣುಗಳ ತೂಕ ಹೆಚ್ಚಾಗಿರುವುದರಿಂದ ಮತ್ತು ದೀರ್ಘ ಪಾಲಿಮರ್ ಸಂರಚನೆಯನ್ನು ಇದು ಹೊಂದಿರುವುದರಿಂದ ಇದನ್ನು ವಿಭಜಿಸುವುದು ಅತೀ ಕಷ್ಟಸಾಧ್ಯವಾಗಿದೆ. ಹಾಗಾಗಿ ಪಾಲಿಸ್ಟಿರೇನ್ ಅಂಶ ಹೊಂದಿರುವ ಪ್ಲಾಸ್ಟಿಕ್ ಉತ್ಪನ್ನಗಳು ಅದೆಷ್ಟೋ ಸಮಯಗಳವರೆಗೆ ಮಣ್ಣಿನಲ್ಲಿ ಕರಗದೇ ಹಾಗೆಯೇ ಉಳಿದುಕೊಂಡಿರುತ್ತದೆ. ಈ ಎಲ್ಲಾ ಅಂಶಗಳನ್ನು ರಾಯಲ್ ಸೊಸೈಟಿ ಆಫ್ ಕೆಮೆಸ್ಟ್ರಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ಪ್ರತೀ ವರ್ಷ 16.5 ಮಿಲಿಯನ್ ಟನ್ ಗಳಷ್ಟು ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುತ್ತಿರುವ ನಮ್ಮ ದೇಶದಲ್ಲಿ, ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ನಿರ್ಮೂಲನೆಗೆ ಬಹುದೊಡ್ಡ ಸವಾಲಾಗಿರುವ ಈ ಪಾಲಿಸ್ಟಿರೇನ್ ಅನ್ನು ಕರಗಿಸಿಕೊಳ್ಳಬಲ್ಲ ಬ್ಯಾಕ್ಟೀರಿಯಾಗಳು ಪತ್ತೆಯಾಗಿರುವುದು ಪ್ಲಾಸ್ಟಿಕ್ ಮುಕ್ತ ದೇಶದ ಕನಸನ್ನು ಕಾಣುತ್ತಿರುವ ಭಾರತಕ್ಕೆ ಬಹುದೊಡ್ಡ ಲಾಭವೆಂದೇ ವಿಶ್ಲೇಷಿಸಲಾಗುತ್ತಿದೆ.

ಈ ಬ್ಯಾಕ್ಟೀರಿಯಾಗಳು ಹೀಗೆ ಕಾರ್ಯಾಚರಿಸುತ್ತವೆ:
– ಪ್ಲಾಸ್ಟಿಕ್‌ ನಲ್ಲಿನ ಇಂಗಾಲದ ಅಣುಗಳನ್ನು ಇವು ಬಳಸಿಕೊಳ್ಳುತ್ತವೆ.

– ಪಾಲಿಸ್ಟಿರೇನ್‌ ಪ್ಲಾಸ್ಟಿಕ್‌ ಅನ್ನು ಈ ಬ್ಯಾಕ್ಟೀರಿಯಾಗಳು ಸಂತಾನಾಭಿವೃದ್ಧಿಗೆ ಬಳಸಿಕೊಳ್ಳುತ್ತವೆ.

– ಪಾಲಿಸ್ಟಿರೇನ್ ಜೈವಿಕವಾಗಿ ಕರಗುವಂತೆ ಈ ಬ್ಯಾಕ್ಟೀರಿಯಾಗಳು ಮಾಡುತ್ತವೆ.

Comments are closed.