ರಾಷ್ಟ್ರೀಯ

ಅಯೋಧ್ಯೆ ವಿವಾದ: ವಿಚಾರಣೆ ಪೂರ್ಣಗೊಳಿಸಲು ಅ.17 ಡೆಡ್​​ ಲೈನ್​​

Pinterest LinkedIn Tumblr


ನವದೆಹಲಿ(ಅ.06): ಅಯೋಧ್ಯೆ ಭೂ ವಿವಾದ ಪ್ರಕರಣವನ್ನು ಆದಷ್ಟೂ ಬೇಗ ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ಮುಂದಾಗಿದೆ. ಅಕ್ಟೋಬರ್ 17ರೊಳಗೆ ಎಲ್ಲಾ ವಿಚಾರಣೆಗಳನ್ನು ಮುಕ್ತಾಯಗೊಳಿಸುವುದಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಹೇಳಿದೆ. ಹಾಗಾಗಿ ಅಕ್ಟೋಬರ್​​​ 17ಕ್ಕೆ ಅಂತಿಮ ತೀರ್ಪು ಹೊರಬೀಳಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಇಂದಿನಿಂದಲೇ ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಆದೇಶದ ಮೇರೆಗೆ ಪೊಲೀಸ್​​​ ಇಲಾಖೆ ಅಯೋಧ್ಯೆ ಸುತ್ತಮುತ್ತ ಹೈ-ಅಲರ್ಟ್​ ಘೋಷಿಸಿದೆ.

ಸುಪ್ರೀಂಕೋರ್ಟ್​ ಅಂತಿಮ ತೀರ್ಪು ಪ್ರಕಟಿಸುವ ದಿನದಂದೇ ನವರಾತ್ರಿ ಹಬ್ಬವೂ ನಡೆಯಲಿದೆ. ಹಾಗಾಗಿ ಅಯೋಧ್ಯೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಯೋಧ್ಯೆ ನಗರದಾದ್ಯಂತ ಸಿಸಿಟಿವಿ ಅಳವಡಿಕೆಗೆ ಸೂಚಿಸಲಾಗಿದೆ. ಅಂತೆಯೇ ದುರ್ಗಾ ಪೂಜೆ ವೇಳೆ ಯಾವುದೇ ಕಾರಣಕ್ಕೂ ಬಣ್ಣಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಎನ್ನಲಾಗಿದೆ.

ಮುಸ್ಲಿಮರ ಕಡೆಯವರು ಅ. 14ರೊಳಗೆ ತನ್ನ ವಾದ ಮಂಡನೆ ಮುಗಿಸಬೇಕಿದೆ. ಅದಾದ ನಂತರ ಶ್ರೀರಾಮ ದೇವರ ಪರ ವಕೀಲರು ಎರಡು ದಿನದಲ್ಲಿ ಅಂದರೆ ಅ.16ರೊಳಗೆ ಉತ್ತರ ರೂಪದಲ್ಲಿ ಪ್ರತಿವಾದ ಮಂಡನೆ ಮುಗಿಸಲು ಒಪ್ಪಿಕೊಂಡಿದ್ದಾರೆ.

ಸಿಜೆಐ ರಂಜನ್ ಗೊಗೋಯ್ ಅವರ ನಿವೃತ್ತಿಗೆ ಇನ್ನು ಒಂದೂವರೆ ತಿಂಗಳಷ್ಟೇ ಬಾಕಿ ಇದೆ. ಅಷ್ಟರೊಳಗೆ ಅವರು ಈ ಪ್ರಕರಣವನ್ನು ಇತ್ಯರ್ಥಪಡಿಸಲು ಬಯಸಿದಂತಿದೆ. ಅದಕ್ಕಾಗಿ ನ್ಯಾಯಪೀಠವು ನಿಗದಿಗಿಂತ ಹೆಚ್ಚು ಸಮಯ ಹಾಗೂ ರಜೆಯ ದಿನಗಳಲ್ಲೂ ಕೆಲಸ ಮಾಡಲಿದೆಯಂತೆ.

ಈ ಹಿಂದೆಯೇ ರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಮೊದಲಾದವರು ಇರುವ ಮಧ್ಯಸ್ಥಿಕೆ ಮಂಡಳಿಯು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಮಾರ್ಚ್ ತಿಂಗಳಲ್ಲೇ ಮಾತುಕತೆಯ ಪ್ರಯತ್ನಗಳನ್ನ ನಡೆಸಿತ್ತು. ಆದರೆ, ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಯಾವ ಕಡೆಯವರೂ ಕೂಡ ಒಂದು ಒಮ್ಮತಕ್ಕೆ ಬರಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವೇ ಈ ಪ್ರಕರಣವನ್ನು ಕೈಗೆತ್ತಿಕೊಂಡು ಪ್ರತೀ ದಿನ ವಿಚಾರಣೆ ನಡೆಸಿ ಆದಷ್ಟೂ ಬೇಗ ಮುಗಿಸಲು ನಿರ್ಧರಿಸಿದೆ. ಅದರಂತೆ ಆ. 6ರಿಂದ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಈಗ ಈ ವಿಚಾರಣೆಗೆ ಇನ್ನಷ್ಟು ವೇಗ ತುಂಬಲು ನಿರ್ಧರಿಸಿರುವ ಸಿಜೆಐ ರಂಜನ್ ಗೊಗೋಯ್ ಅವರು ಅಕ್ಟೋಬರ್ 17ಕ್ಕೆ ಡೆಡ್​ಲೈನ್ ನಿಗದಿ ಮಾಡಿದ್ದಾರೆ.

ಏನಿದು ಪ್ರಕರಣ?: ಅಯೋಧ್ಯೆಯ ಬಾಬ್ರಿ ಮಸೀದಿ ಇದ್ದ ಜಾಗದ 2.77 ಎಕರೆ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬುದೇ ಈಗ ಈ ಪ್ರಕರಣದ ವಸ್ತುವಾಗಿದೆ. ಬಾಬ್ರಿ ಮಸೀದಿ ಕಟ್ಟುವ ಮುಂಚೆ ಈ ಜಾಗದಲ್ಲಿ ರಾಮನ ದೇವಸ್ಥಾನವಿತ್ತು ಎಂಬುದು ಹಿಂದೂಗಳ ವಾದವಾಗಿದೆ. ಬಾಬ್ರಿ ಮಸೀದಿ ಇಡೀ ಜಾಗ ತಮಗೆ ಸೇರಿದ್ದು ಎಂಬುದು ಸುನ್ನಿ ವಕ್ಫ್ ಮಂಡಳಿಯ ವಾದ. ಹಾಗೆಯೇ ನಿರ್ಮೋಹಿ ಅಖಾಡ ಕೂಡ ಇದು ತನಗೆ ಸೇರಿದ್ದೆಂದು ಹೇಳುತ್ತಿದೆ. 2010ರಲ್ಲಿ ಅಲಾಹಾಬಾದ್ ಉಚ್ಚ ನ್ಯಾಯಾಲಯವು ಈ ಮೂರೂ ಪಕ್ಷಗಳಿಗೆ ವಿವಾದಿತ ಭೂಮಿಯನ್ನು ಸಮಾನವಾಗಿ ಹಂಚುವ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಹಲವು ಮೇಲ್ಮನವಿಗಳು ದಾಖಲಾದವು. ಈಗ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಇದರ ವಿಚಾರಣೆ ನಡೆಸುತ್ತಿದೆ.

Comments are closed.