ರಾಷ್ಟ್ರೀಯ

ಬಿಜೆಪಿ ಟಿಕೆಟ್ ಸಿಕ್ಕ ರಹಸ್ಯ ಬಿಚ್ಚಿಟ್ಟ ಹರಿಯಾಣ ಅಭ್ಯರ್ಥಿ ಸೊನಾಲಿ ಪೋಗಟ್

Pinterest LinkedIn Tumblr


ನವದೆಹಲಿ (ಅ. 4): ಹರಿಯಾಣದ ಅದಂಪುರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಟಿಕ್​ಟಾಕ್ ಸ್ಟಾರ್​ ಸೊನಾಲಿ ಪೋಗಟ್​ ತಾನೇನಾದರೂ ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಟಿಕ್​ ಟಾಕ್​ ಮೂಲಕ ದೇಶ ಭಕ್ತಿಯನ್ನು ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಇದೇ ತಿಂಗಳ 21ರಂದು ಚುನಾವಣೆ ನಡೆಯಲಿದೆ. ಅ. 24ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್​ ಪ್ರಾಬಲ್ಯವಿರುವ ಅದಂಪುರ್ ವಿಧಾನಸಭಾ ಕ್ಷೇತ್ರ 50 ವರ್ಷಗಳಿಂದ ಕಾಂಗ್ರೆಸ್​ ಭದ್ರಕೋಟೆಯಾಗಿ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಭಾವಿ ನಾಯಕರನ್ನು ಚುನಾವಣೆಗೆ ನಿಲ್ಲಿಸುವ ಬದಲು ಸೊನಾಲಿ ಪೋಗಟ್​ ಅವರನ್ನು ಆಯ್ಕೆ ಮಾಡಿರುವುದು ಸ್ವತಃ ಬಿಜೆಪಿಯಲ್ಲೂ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಬಗ್ಗೆ ನ್ಯೂಸ್​18 ಜೊತೆಗೆ ಮಾತನಾಡಿರುವ ಸೊನಾಲಿ ಪೋಗಟ್, ಟಿಕ್​ ಟಾಕ್​ ಮೂಲಕ ದೇಶಭಕ್ತಿಯನ್ನು ಸಾರುವ, ಮಹಿಳಾ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತೇನೆ. ಹಾಗೂ ತನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಿಳಿಸುವ ಮಾಧ್ಯಮವನ್ನಾಗಿ ಟಿಕ್ ಟಾಕ್ ಅನ್ನು ಬಳಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ತಾನು ಟಿಕ್​ ಟಾಕ್ ಸ್ಟಾರ್ ಎಂಬ ಕಾರಣಕ್ಕೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ ಎಂದೂ ಹೇಳಿರುವ ಸೊನಾಲಿ ಪೋಗಟ್, ನಾನು 12 ವರ್ಷಗಳಿಂದ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತೆ. ಮಧ್ಯಪ್ರದೇಶದ ಟ್ರೈಬಲ್ ಮೋರ್ಚಾದಲ್ಲಿ ಕೆಲಸ ಮಾಡಿರುವ ನಾನು ಬುಡಕಟ್ಟು ಸಮುದಾಯದವರನ್ನು ಬಿಜೆಪಿಯತ್ತ ಸೆಳೆಯಲು ಶ್ರಮಿಸಿದ್ದೇನೆ. ನಾನು ಟಿಕ್ ಟಾಕ್ ಮತ್ತು ಧಾರಾವಾಹಿಗಳಲ್ಲೂ ಅಭಿನಯಿಸುತ್ತೇನೆ. ಆದರೆ, ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಇದೊಂದೇ ಕಾರಣವಲ್ಲ ಎಂದು ತಾವೇಕೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೆಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಟಿಕ್​ಟಾಕ್​ ಆ್ಯಪ್ ಮೂಲಕ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುತ್ತಿದ್ದ ಸೊನಾಲಿ ಪೋಗಟ್ ಮಾದಕವಾಗಿ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಧಾರಾವಾಹಿಗಳಲ್ಲೂ ನಟಿಸಿರುವ ಸೊನಾಲಿಗೆ ಟಿಕ್​ಟಾಕ್​ನಲ್ಲಿ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಇದ್ದಾರೆ. ಆ ಫಾಲೋವರ್ಸ್​​ಗಳೆಲ್ಲ ಸೊನಾಲಿಗೇ ಮತ ಹಾಕಬಹುದು ಎಂಬ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಂತಿದೆ. ಮೂರು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಭಜನ್​ ಲಾಲ್​ ಅವರ ಮಗ ಕುಲದೀಪ್ ಬಿಶೋನಿ ವಿರುದ್ಧ ಸೊನಾಲಿ ಪೋಗಟ್ ಸ್ಪರ್ಧೆಗಿಳಿಯಲಿದ್ದಾರೆ.

ಜಾಟ್​ ಸಮುದಾಯದವರು ಹೆಚ್ಚಾಗಿರುವ ಆದಂಪುರ್​ನಲ್ಲಿ ಬಿಶೋನಿ ಕುಟುಂಬದ ಪ್ರಾಬಲ್ಯ ಜೋರಾಗೇ ಇದೆ. ಅರ್ಧ ಶತಮಾನದಿಂದ ಇದೇ ಕುಟುಂಬ ಇಲ್ಲಿ ಹಿಡಿತ ಸಾಧಿಸಿದೆ. ಹೀಗಾಗಿ, ಈ ಬಾರಿಯ ಹರಿಯಾಣದ ಆದಂಪುರದ ಚುನಾವಣೆಯಲ್ಲಿ ಬಿಶೋನಿ ಕುಟುಂಬದ ವರ್ಚಸ್ಸು ಮುಖ್ಯವಾಗುತ್ತದೋ ಅಥವಾ ಸೊನಾಲಿ ಪೋಗಟ್​ ಅವರ ಜನಪ್ರಿಯತೆ ಮುಖ್ಯವಾಗುತ್ತದೋ ಎಂಬ ಕುತೂಹಲ ತಲೆದೋರಿದೆ. ಅ. 12ರಂದು ಹರಿಯಾಣ ವಿಧಾನಸಭಾ ಚುನಾವಣೆ ನಡೆಯಲಿದೆ.

Comments are closed.