ರಾಷ್ಟ್ರೀಯ

ಚಿನ್ಮಯಾನಂದ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಜಾಮೀನು ಅರ್ಜಿ ವಜಾ

Pinterest LinkedIn Tumblr


ಲಖನೌ: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ್ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿ, ಈಗ ಸುಲಿಗೆ ಆರೋಪದಡಿ ಬಂಧನಕ್ಕೊಳಗಾಗಿರುವ ಸಂತ್ರಸ್ತ ಕಾನೂನು ವಿದ್ಯಾರ್ಥಿನಿಗೆ ಜಾಮೀನು ನೀಡಲು ಸ್ಥಳೀಯ ಕೋರ್ಟ್ ನಿರಾಕರಿಸಿದೆ.

ವಿದ್ಯಾರ್ಥಿನಿ ಯಾವ ಆಧಾರದ ಮೇಲೆ ಜಾಮೀನು ಕೇಳುತ್ತಾರೆ? ಅವಳೇ ಸುಲಿಗೆ ಗ್ಯಾಂಗ್ ನ ನಾಯಕಿ… ಕೋರ್ಟ್ ಇದನ್ನು ಗಮನದಲ್ಲಿಟ್ಟುಕೊಂಡು ಜಾಮೀನು ನಿರಾಕರಿಸಿದೆ ಎಂದು ಚಿನ್ಮಯಾನಂದ್ ಪರ ವಕೀಲ ಮನೇಂದ್ರ ಸಿಂಗ್ ಅವರು ಹೇಳಿದ್ದಾರೆ.

ಇಂದು ಬೆಳಗಷ್ಟೆ ಅತ್ಯಾಚಾರ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಸಂತ್ರಸ್ತ ಯುವತಿಯನ್ನು ಬಂಧಿಸಿದ್ದರು. ಬಳಿಕ ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಯುವತಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಬೆದರಿಕೆ ಹಾಗೂ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಂತ್ರಸ್ತ ಕಾನೂನು ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ.

ಚಿನ್ಮಯಾನಂದ್ ಅವರು ತಮ್ಮ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಯುವತಿ ಹಾಗೂ ಇತರೆ ಮೂವರು ವಿರುದ್ಧ ಪ್ರತಿ ದೂರು ದಾಖಲಿಸಿದ್ದು, ಅವರು ತನಗೆ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿದ್ದಾರೆ.

ಚಿನ್ಮಯಾನಂದ್ ದೂರಿನ ಆಧಾರದ ಮೇಲೆ ಎಸ್ಐಟಿ ಅಧಿಕಾರಿಗಳು ಯುವತಿ ಹಾಗೂ ಇತರೆ ಮೂವರು ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಗಾಗಿ ಕಾನೂನು ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದಿದ್ದರು.

ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ಅವರು ಒಂದು ವರ್ಷಗಳ ಕಾಲ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಶೆಹಜಾನ್ಪುರದ ಕಾನೂನು ವಿದ್ಯಾರ್ಥಿನಿ ಆರೋಪಿಸಿದ್ದರು. ಈ ಸಂಬಂಧ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿ, ಕೋರ್ಟ್ ನಲ್ಲಿ ಹೇಳಿಕೆ ದಾಖಲಿಸಿದ ನಂತರ ಆರೋಪಿ ಚಿನ್ಮಯಾನಂದ್ ಅವರನ್ನು ಎಸ್ಐಟಿ ಅಧಿಕಾರಿಗಳು ಕಳೆದ ಶುಕ್ರವಾರ ಬಂಧಿಸಿದ್ದರು. ಬಳಿಕ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Comments are closed.