ರಾಷ್ಟ್ರೀಯ

ಡಿಕೆಶಿ ಜಾಮೀನು ಅರ್ಜಿ ವಜಾ, ತಿಹಾರ್ ಜೈಲೇ ಗತಿ

Pinterest LinkedIn Tumblr


ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದಾಗಿ ಬುಧವಾರ ಸಂಜೆ ಕೋರ್ಟ್ ತೀರ್ಪು ಪ್ರಕಟಿಸಿದೆ. ಇದರಿಂದ ಡಿಕೆಶಿಗೆ ತಿಹಾರ್ ಜೈಲುವಾಸ ಮುಂದುವರಿದಂತಾಗಿದೆ.

ಇಂದು ಮಧ್ಯಾಹ್ನ 3.30ಕ್ಕೆ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ಕುರಿತ ಆದೇಶ ಪ್ರಕಟವಾಗಬೇಕಿತ್ತು. ಆದರೆ ಸುಮಾರು ಒಂದೂವರೆ ಗಂಟೆಗಳ ಕಾಲ ಜಡ್ಜ್ ಕುಹರ್ ಅವರು ತಮ್ಮ ಕೋಣೆಯಲ್ಲಿಯೇ ಹಾಜರಾದ ವಕೀಲರ ಮಾಹಿತಿಯನ್ನು ಪಡೆದುಕೊಂಡು, 5.15ಕ್ಕೆ ಜಾಮೀನು ಅರ್ಜಿ ವಜಾಗೊಳಿಸಿರುವುದಾಗಿ ಒಂದೇ ವಾಕ್ಯದಲ್ಲಿ ತೀರ್ಪು ಪ್ರಕಟಿಸಿದ್ದರು.

ಕೋರ್ಟ್ ಗೆ ಡಿಕೆ ಶಿವಕುಮಾರ್ ಪರ ಹಾಗೂ ಜಾರಿ ನಿರ್ದೇಶನಾಲಯದ ಪರ ವಕೀಲರು ಹಾಜರಾಗಿದ್ದರು.

ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಡಿಕೆ ಶಿವಕುಮಾರ್ ಅವರ ನಿರಂತರ ವಿಚಾರಣೆ ಬಳಿಕ ದೆಹಲಿ ರೋಸ್ ಅವೆನ್ಯೂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿತ್ತು. ಕಳೆದ ಆರು ದಿನಗಳಿಂದ ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದರು.

ಸೆಪ್ಟೆಂಬರ್ 17ರಿಂದ ನ್ಯಾಯಾಂಗ ಬಂಧನದಲ್ಲಿರುವ ಡಿಕೆ ಶಿವಕುಮಾರ್ ತಮಗೆ ಜಾಮೀನು ನೀಡಬೇಕು, ವಿಚಾರಣೆಗೆ ಸಹಕರಿಸಲು ಸಿದ್ದ ಎಂದು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ವಿಚಾರಣೆ ವೇಳೆ ತಿಳಿಸಿದ್ದರು. ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ವಾದ, ಪ್ರತಿವಾದ ಆಲಿಸಿದ ಬಳಿಕ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಿದ್ದರು.

ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೊರೆ:

ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಬೆನ್ನಲ್ಲೇ ಇದೀಗ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಲು ಡಿಕೆ ಶಿವಕುಮಾರ್ ಪರ ವಕೀಲರು ಸಿದ್ದತೆ ನಡೆಸಿದ್ದಾರೆ.

ಕೋರ್ಟ್ ತೀರ್ಪಿನಲ್ಲೇನಿದೆ:

1)ಡಿಕೆ ಶಿವಕುಮಾರ್ ಈ ಹಂತದಲ್ಲಿ ಜಾಮೀನಿಗೆ ಅರ್ಹರಲ್ಲ

2)ವೈದ್ಯಕೀಯ ವರದಿ ಪ್ರಕಾರ ಡಿಕೆ ಶಿವಕುಮಾರ್ ಆರೋಗ್ಯ ಸ್ಥಿರವಾಗಿದೆ

3)ತಿಹಾರ್ ಜೈಲಿನಲ್ಲಿಯೇ ಎಲ್ಲಾ ವೈದ್ಯಕೀಯ ಸೌಲಭ್ಯವಿದೆ.

4) ತನಿಖೆ ಇನ್ನೂ ಆರಂಭದ ಹಂತದಲ್ಲಿದೆ

5)ಡಿಕೆಶಿ ಹಾಗೂ ಉಳಿದ ಆರೋಪಿಗಳ ವಿಚಾರಣೆಯೂ ನಡೆಯುತ್ತಿದೆ

6)ಡಿಕೆ ಶಿವಕುಮಾರ್ ರನ್ನು ಬಿಡುಗಡೆ ಮಾಡಿದರೆ ತನಿಖೆಗೆ ತೊಂದರೆ ಆಗಬಹುದು

7)ಡಿಕೆ ಶಿವಕುಮಾರ್ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಸಾಕ್ಷ್ಯ ನಾಶಪಡಿಸಬಹುದು

ಡಿಕೆಶಿ ಜಾಮೀನಿಗಾಗಿ ವಿಶೇಷ ಪೂಜೆ:

ಮೈಸೂರಿನ ಜಾಮುಂಡಿ ಬೆಟ್ಟದಲ್ಲಿ ಡಿಕೆ ಶಿವಕುಮಾರ್ ಅಭಿಮಾನಿಗಳು ಚಾಮುಂಡೇಶ್ವರಿ ದೇವಿಗೆ ಜಾಮೀನು ಸಿಗುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.

Comments are closed.