ರಾಷ್ಟ್ರೀಯ

ಕಾಲ್​ ಟ್ಯಾಕ್ಸಿಯಲ್ಲಿ ಕಾಂಡೋಮ್ ಕಡ್ಡಾಯ

Pinterest LinkedIn Tumblr


ದೆಹಲಿ (ಸೆಪ್ಟೆಂಬರ್.22); ರಾಷ್ಟ್ರ ರಾಜಧಾನಿಯ ಕಾಲ್ ಟ್ಯಾಕ್ಸಿಗಳಲ್ಲಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳಲ್ಲಿ ಎಲ್ಲಾ ಔಷಧಗಳ ಜೊತೆಗೆ ಕಾಂಡೋಮ್ ಇಲ್ಲ ಎಂಬ ಕಾರಣಕ್ಕೆ ಪೊಲೀಸರು ಭಾರೀ ಮೊತ್ತದ ದಂಡ ವಿಧಿಸುತ್ತಿದ್ದಾರೆ ಎಂದು ಅಲ್ಲಿನ ಕಾಲ್ ಟ್ಯಾಕ್ಸಿ ಚಾಲಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ನೂತನ ಮೋಟಾರ್ ವಾಹನ ಕಾಯ್ದೆ-2019 ಕಳೆದ ಸೆಪ್ಟೆಂಬರ್ 1 ರಿಂದ ದೇಶದಾದ್ಯಂತ ಜಾರಿಯಾಗಿದೆ. ಈ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಟ್ರಾಫಿಕ್ ಪೊಲೀಸರು ರಾಷ್ಟ್ರದಾದ್ಯಂತ ತೀವ್ರ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ, ಹೆಲ್ಮೆಟ್ ಸೇರಿದಂತೆ ಸೂಕ್ತ ದಾಖಲೆಗಳಿಲ್ಲದೆ ರಸ್ತೆಗಿಳಿಯುವ ವಾಹನಗಳಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ.

ಈ ಕುರಿತು ಕಳೆದ ಮೂರು ವಾರಗಳಿಂದ ಸತತ ವರದಿಯಾಗುತ್ತಲೇ ಇದೆ. ಆದರೆ, ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಲ್ ಟ್ಯಾಕ್ಸಿಗಳ ತಪಾಸಣೆ ನಡೆಸುತ್ತಿರುವ ಸಂಚಾರಿ ಪೊಲೀಸರು ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಲ್ಲದ ಕಾರಣಕ್ಕೆ ಕಾರು ಚಾಲಕರಿಗೆ ದಂಡ ವಿಧಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು ಎಲ್ಲರನ್ನೂ ಆಶ್ಚರ್ಯಕ್ಕೆ ದೂಡಿದೆ.

ನೂತನವಾಗಿ ಜಾರಿಯಾಗಿರುವ ಮೋಟಾರು ವಾಹನ ಕಾಯ್ದೆಯಲ್ಲಿ ಕಾಲ್ ಟ್ಯಾಕ್ಸಿ ಚಾಲಕರು ತಮ್ಮ ಕಾರಿನಲ್ಲಿ ಕಡ್ಡಾಯವಾಗಿ ಕಾಂಡೋಮ್ ಅನ್ನು ಇಟ್ಟುಕೊಂಡಿರಬೇಕು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೂ, ಕಾಲ್ ಟ್ಯಾಕ್ಸಿಯಲ್ಲಿ ಕಾಂಡೋಮ್ ಇರುವುದು ಅವಶ್ಯಕ ಎಂದು ರಾಜಧಾನಿಯಲ್ಲಿ ಈವರೆಗೆ ಅದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಇದರ ಆಧಾರದ ಮೇಲೆ ದಂಡ ವಿಧಿಸಲಾಗುತ್ತಿದೆ ಎಂದು ಕೆಲವು ಕಾರು ಚಾಲಕರು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

ಆದರೆ, ಕೆಲವರು ಕಾಂಡೋಮ್ ಕೇವಲ ಸುರಕ್ಷಿತ ಲೈಂಗಿಕ ಕ್ರಿಯೆ ಮಾತ್ರವಲ್ಲ, ಮಳೆಗಾಲದಲ್ಲಿ ಕಾರಿನಲ್ಲಿ ಎಲ್ಲಾದರೂ ಲೀಕೇಜ್ ಸಮಸ್ಯೆ ಕಂಡು ಬಂದರೆ ಅದನ್ನು ನಿಲ್ಲಿಸಲು ಅಥವಾ ಯಾರಿಗಾದರೂ ಅಪಘಾತವಾಗಿ ರಕ್ತ ಸೋರಿಕೆಯಾದರೆ ಅದನ್ನು ತಡೆಯಲು ಸಹ ಕಾಂಡೋಮ್ ಸಹಕಾರಿಯಾಗುತ್ತದೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಒಟ್ಟಾರೆ ಹೊಸ ಮೋಟಾರು ಕಾಯ್ದೆ ಜಾರಿಗೆ ಬಂದ ನಂತರ ದುಬಾರಿ ಮೊತ್ತದ ದಂಡದ ಬಗ್ಗೆ ಅಲ್ಲಲ್ಲಿ ನಿರಂತರವಾಗಿ ವರದಿಯಾಗುತ್ತಲೇ ಇತ್ತು. ಆದರೆ, ಇದೀಗ ಕಾಂಡೋಮ್ ರಹಿತ ಟ್ಯಾಕ್ಸಿ ಚಾಲನೆಗೂ ಸಹ ಪೊಲೀಸರು ಭಾರೀ ಮೊತ್ತದ ದಂಡ ವಿಧಿಸುತ್ತಿರುವುದು ಕಾರು ಚಾಲಕರನ್ನು ಆಘಾತಕ್ಕೆ ದೂಡಿದರೆ, ಜನ ಸಾಮಾನ್ಯರನ್ನು ಆಶ್ವರ್ಯಕ್ಕೆ ಈಡುಮಾಡಿದೆ.

Comments are closed.