ಕರ್ನಾಟಕ

ಉಪಚುನಾವಣೆ: ನಳಿನ್‌ ಕುಮಾರ್‌ ಕಟೀಲುಗೆ ಪ್ರಥಮ ಅಗ್ನಿಪರೀಕ್ಷೆ

Pinterest LinkedIn Tumblr


ಬೆಂಗಳೂರು: ರಾಜ್ಯದ ಹದಿನೈದು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಯಾಗಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರಿಗೆ ಮೊದಲ “ಟಾಸ್ಕ್’ ಎದುರಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮುಂದಿನ ಮೂರೂ ವರೆ ವರ್ಷಗಳ ಕಾಲ ಬಿಜೆಪಿ ಸರಕಾರವನ್ನು ಭದ್ರ ಗೊಳಿಸಬೇಕಾದ ಬಹು ದೊಡ್ಡ ಸವಾಲು ಬಿಜೆಪಿ ರಾಜ್ಯಾಧ್ಯಕ್ಷರ ಹೆಗಲ ಮೇಲಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡ ಅನಂತರ ಇದೇ ಮೊದಲ ಬಾರಿಗೆ ನಳಿನ್‌ ಕುಮಾರ್‌ ಅವರ ನೇತೃತ್ವದಲ್ಲಿ ಉಪಚುನಾವಣೆ ನಡೆಯುತ್ತಿದೆ. 15 ಕ್ಷೇತ್ರಗಳ ಪೈಕಿ ಕನಿಷ್ಠ 12ರಿಂದ 14 ಕ್ಷೇತ್ರಗಳನ್ನು ಗೆಲ್ಲಿಸಬೇಕಾದ ಮಹತ್ತರ ಜವಾಬ್ದಾರಿ ಇವರ ಮೇಲಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಈಗಾಗಲೇ ಸಾಕಷ್ಟು ಅಸಮಾಧಾನಗಳು ಭುಗಿಲೆದ್ದಿವೆ. ಕ್ಷೇತ್ರಗಳಲ್ಲಿ ಕಾರ್ಯಕರ್ತರು ಮತ್ತು ಅನರ್ಹಗೊಂಡಿರುವ ಶಾಸಕರ ಬೆಂಬಲಿಗರ ನಡುವಿನ ಅಸಮಾಧಾನಗಳನ್ನು ಸರಿಪಡಿಸಬೇಕಾದ ಸವಾಲು ಕೂಡ ಹೊಸ ಅಧ್ಯಕ್ಷರ ಮುಂದಿದೆ.

ಬಿ.ಎಸ್‌.ಯಡಿಯೂರಪ್ಪ ಅವರು ಅನರ್ಹಗೊಂಡಿರುವ ಶಾಸಕರಿಗೆ ಯಾವ ಭರವಸೆ ನೀಡಿದ್ದಾರೆ ಎಂಬುದು ಸದ್ಯ ರಾಜ್ಯಾಧ್ಯಕ್ಷರಿಗೂ ತಿಳಿದಿರಲು ಸಾಧ್ಯವಿಲ್ಲ. ಆದರೂ ಪಕ್ಷ ಸಂಘಟನೆ ಮತ್ತು ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಉಪಚುನಾವಣೆಯಲ್ಲಿ ಗೆಲ್ಲಿಸಬೇಕಾದ ಬಹುದೊಡ್ಡ “ಟಾಸ್ಕ್’ ಹೊಸ ಅಧ್ಯಕ್ಷರ ಮೇಲಿದೆ. ರಾಜ್ಯ ಬಿಜೆಪಿಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ಸಂಘಟನ ಶಕ್ತಿ ಮತ್ತು ಅವರ ಸೂಚನೆಯನ್ನು ಯಾರೂ ಕೂಡ ಅವಗಣಿಸಲು ಸಾಧ್ಯ ವಿಲ್ಲ. ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ರಾದ ನಳಿನ್‌ ಕುಮಾರ್‌ ಕಟೀಲು ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿರುವ ಅಭ್ಯರ್ಥಿಯನ್ನು ನೇರವಾಗಿ ವಿರೋಧಿ ಸಲು ಸಾಧ್ಯವಿಲ್ಲ.

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಸೋಲು ಕಂಡರೆ, ಸರಕಾರ ಪತನವಾಗುವ ಜತೆಗೆ ಹೊಸ ಅಧ್ಯಕ್ಷರಿಗೆ ಹಿನ್ನಡೆಯೂ ಆಗಬಹುದು. ಹೀಗಾಗಿ ಅಧ್ಯಕ್ಷರು ಯಾವ ರೀತಿಯ ಕಾರ್ಯತಂತ್ರ ರೂಪಿಸಲಿದ್ದಾರೆ ಎಂಬುದು ಅತಿಮುಖ್ಯವಾಗಿದೆ.

ಬಿಎಸ್‌ವೈಗೂ ಇದೆ ಸವಾಲು
ರಾಜ್ಯ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮುಂದೆಯೂ ಈಗ ಬಹು ದೊಡ್ಡ ಸವಾಲಿದೆ. ಬಿಜೆಪಿಗೆ ಜನಬೆಂಬಲವಿದೆ. ಕಳೆದ ವಿಧಾನಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಿಸಿ ದ್ದಾರೆ. ಲೋಕಸಭೆಯಲ್ಲಿ ನಿರೀಕ್ಷೆಗೂ ಮೀರಿದ ಫ‌ಲ ಸಿಕ್ಕಿದೆ. ಬಿಜೆಪಿ ಸರಕಾರ ರಚನೆಯಾದ ಅನಂತರ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಬಿಜೆಪಿಗೆ ಜನಬೆಂಬಲ ಇದೆ ಎಂಬುದನ್ನು ಪದೇ ಪದೇ ಹೇಳಿಕೊಂಡು ಬರುತ್ತಿರುವ ಸಿಎಂ ಯಡಿಯೂರಪ್ಪ ಅವರಿಗೆ ಉಪ ಚುನಾವಣೆ ದೊಡ್ಡ ಸವಾಲಾಗಿದೆ. ಅಭ್ಯರ್ಥಿ

ಆಯ್ಕೆ ಮಾತ್ರವಲ್ಲ, ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕಾದ ಅನಿವಾರ್ಯತೆಯೂ ಇವರ ಮುಂದಿದೆ. ರಾಜ್ಯದ ಅತಿವೃಷ್ಟಿ- ಅನಾವೃಷ್ಟಿಯ ಪರಿಸ್ಥಿತಿಯ ನಡುವೆಯೇ ಜನ ಬೆಂಬಲವನ್ನು ಸಾಬೀತುಪಡಿಸಬೇಕಿದೆ.

Comments are closed.