ರಾಷ್ಟ್ರೀಯ

ಹೆಲ್ಮೆಟ್ ಧರಿಸದ ಬಸ್ ಡ್ರೈವರಿಗೆ ದಂಡ ವಿಧಿಸಿದ ಸಾರಿಗೆ ಅಧಿಕಾರಿ!

Pinterest LinkedIn Tumblr


ನೋಯ್ಡಾ: ನೂತನ ಮೋಟಾರು ವಾಹನ ಕಾಯ್ದೆಯ ಭಾರೀ ಮೊತ್ತದ ದಂಡದ ಬಗ್ಗೆ ಈಗಾಗಲೇ ವರದಿಯಾಗುತ್ತಿದೆ. ಆದರೆ ಬಸ್ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ 500 ರೂಪಾಯಿ ದಂಡ ಕಟ್ಟಬೇಕೆಂದು ಚಲನ್ ನೀಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

ತನ್ನ ಬಸ್ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂದು 500 ರೂಪಾಯಿ ದಂಡ ವಿಧಿಸಿರುವುದಾಗಿ ಖಾಸಗಿ ಬಸ್ ಮಾಲೀಕರೊಬ್ಬರು ತಿಳಿಸಿದ್ದಾರೆ. ಮಾಲೀಕ ನಿರಾಂಕಾರ್ ಸಿಂಗ್ ಪ್ರಕಾರ, ದಂಡ ವಿಧಿಸಿರುವ ಆನ್ ಲೈನ್ ಚಲನ್ ಸೆಪ್ಟೆಂಬರ್ 11ರಂದು ಸಿಕ್ಕಿತ್ತು. ಅದರಲ್ಲಿ ಹೆಲ್ಮೆಟ್ ಧರಿಸದಿರುವುದಕ್ಕೆ ದಂಡ ವಿಧಿಸಿರುವುದಾಗಿ ತಿಳಿಸಿದೆ. ಒಂದು ವೇಳೆ ಅಗತ್ಯಬಿದ್ದಲ್ಲಿ ಕೋರ್ಟ್ ನಲ್ಲಿ ದಂಡ ಪಾವತಿಸುವುದಾಗಿ ಸಿಂಗ್ ವಿವರಿಸಿದ್ದಾರೆ.

ಸಾರಿಗೆ ಉದ್ಯಮ ನಡೆಸುತ್ತಿರುವ ಸಿಂಗ್ ಅವರ ಪುತ್ರ ಸಾರಿಗೆ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಸುಮಾರು 40ರಿಂದ 50 ಬಸ್ ಗಳು ನೋಯ್ಡಾದಲ್ಲಿರುವ ಶಾಲೆ ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳನ್ನು ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ.

ಆದರೆ ಇದು ಸಾರಿಗೆ ಇಲಾಖೆಯ ಕಳಪೆ ಮಟ್ಟದ ನಿರ್ವಹಣೆಯನ್ನು ಸಾಬೀತುಪಡಿಸುತ್ತದೆ ಎಂದು ಸಿಂಗ್ ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದು, ಹೀಗೆ ಕಾನೂನು ಬಾಹಿರವಾಗಿ ಇಂತಹ ದಂಡ ವಿಧಿಸಿದರೆ ಜನರಿಗೆ ಅಚ್ಚರಿಯಾಗಬಹುದು. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಅಗತ್ಯಬಿದ್ದರೆ ಕೋರ್ಟ್ ನಲ್ಲಿಯೂ ಪ್ರಶ್ನಿಸುವುದಾಗಿ ಹೇಳಿದರು.

Comments are closed.