ರಾಷ್ಟ್ರೀಯ

ಆರ್​ಎಸ್​ಎಸ್​ ಮಾದರಿ ಪಕ್ಷ ಕಟ್ಟಲು ನಿರ್ಧರಿಸಿದ ಕಾಂಗ್ರೆಸ್

Pinterest LinkedIn Tumblr


ನವದೆಹಲಿ (ಸೆಪ್ಟೆಂಬರ್.12); ದೇಶದಲ್ಲಿ ಕ್ರಮೇಣವಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ರಾಜಕೀಯವಾಗಿ ಮತ್ತೆ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ಸಲುವಾಗಿ ಆರ್​ಎಸ್​ಎಸ್​ ಮಾದರಿಯಲ್ಲಿ ‘ಪ್ರೇರಕ್’ ಗಳನ್ನು ನೇಮಿಸುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದೆ. ಮಹಾತ್ಮಾ ಗಾಂಧಿ ಅವರ 150 ನೇ ಜನ್ಮ ದಿನಾಚರಣೆಯ ಕಾಂಗ್ರೆಸ್ ಕಾರ್ಯಸೂಚಿಯಲ್ಲಿ ಈ ತಂತ್ರವೂ ಇರಲಿದ್ದು, ಈ ಕುರಿತು ಚರ್ಚಿಸಲು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಇಂದು ದೊಡ್ಡ ಮಟ್ಟದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಕಾಂಗ್ರೆಸ್ ನಡೆಸುತ್ತಿರುವ ಮೊದಲ ದೊಡ್ದ ಮಟ್ಟದ ಸಭೆ ಇದಾಗಿದೆ.

ಮೂಲಗಳ ಪ್ರಕಾರ ಇಂದು ಆರಂಭವಾಗುವ ಸಭೆಯ ಕಾರ್ಯಸೂಚಿಯ ಪ್ರಕಾರ ಗಾಂಧಿ ಜಯಂತಿ ಸಿದ್ಧತೆಗಳು, ಪಕ್ಷದ ಸದಸ್ಯತ್ವಕ್ಕೆ ಚಾಲನೆ ಮತ್ತು ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಿಯಾಂಕ ಗಾಂಧಿ, ಪಕ್ಷದ ಇತರೆ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖ್ಯಸ್ಥರು ಹಾಜರಾಗಲಿದ್ದಾರೆ. ಅಲ್ಲದೆ, ಈ ಸಭೆಯಲ್ಲಿ ಪಕ್ಷದ ಭವಿಷ್ಯದ ಕಾರ್ಯಸೂಚಿಯ ಜೊತೆಗೆ ದೇಶದ ಆರ್ಥಿಕ ಕುಸಿತದ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ.

ಆರ್​ಎಸ್​ಎಸ್​ ಹಾಗೂ ಬಿಜೆಪಿ ತಮ್ಮ ಪಕ್ಷವನ್ನು ಬಲಪಡಿಸಲು ಆಗಿಂದಾಗ್ಗೆ ದೇಶದಾದ್ಯಂತ ಪಕ್ಷದ ಸದಸ್ಯತ್ವಕ್ಕೆ ಚಾಲನೆ ನೀಡುತ್ತಲೇ ಇರುತ್ತದೆ. ಆದರೆ , ಮತ್ತೊಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ತೀರಾ ವಿರಳ. ಹೀಗಾಗಿ ಭವಿಷ್ಯದಲ್ಲಿ ಪಕ್ಷವನ್ನು ಬಲವಾಗಿಸುವ ಉದ್ದೇಶದಿಂದ ಜನರೊಂದಿಗೆ ಬೆರೆಯುವ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ, ದೇಶದಾದ್ಯಂತ ಪಕ್ಷದ ಸದಸ್ಯತ್ವಕ್ಕೆ ಚಾಲನೆ ನೀಡುವ ಹಾಗೂ ಜನರಲ್ಲಿ ಪಕ್ಷದ ಕುರಿತು ಧನಾತ್ಮಕ ಅಂಶಗಳನ್ನು ಬಿತ್ತುವ ಸಲುವಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ‘ಪ್ರೇರಕ್’ ಗಳನ್ನು ನೇಮಿಸಲಿದೆ ಎಂದು ಐಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರೇರಕ್​ಗಳಾಗಿ ಕಾರ್ಯ ನಿರ್ವಹಿಸಲು ಸಾಮರ್ಥ್ಯವಿರುವ ನಾಯಕರನ್ನು ಆಯ್ಕೆ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಎಲ್ಲಾ ರಾಜ್ಯ ಕಾಂಗ್ರೆಸ್ ಘಟಕಗಳಿಗೆ ಸೂಚಿಸಿದೆ. ಇವರಿಗೆ ಹಲವು ದಿನಗಳ ವರೆಗೆ ಸತತ ತರಬೇತಿ ನೀಡಿ ಆಯಾ ಜಿಲ್ಲೆಗಳಿಗೆ ನೇಮಿಸಲಾಗುವುದು. ಈ ಪ್ರೇರಕ್​ಗಳು ಪಕ್ಷದ ಕಾರ್ಯಸೂಚಿಯಂತೆ ಕೆಲಸ ನಿರ್ವಹಿಸುತ್ತಾರೆ. ಮತ್ತು ಆರ್​ಎಸ್​ಎಸ್​ ಪ್ರಚಾರಕರಂತೆ ಪಕ್ಷದ ಕೆಲಸವನ್ನು ನೋಡಿಕೊಳ್ಳುತ್ತಾರೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೀಗೆ ಪ್ರೇರಕ್ ಹೆಸರಿನ ಪ್ರಚಾರಕರನ್ನು ನೇಮಿಸಿಕೊಳ್ಳುತ್ತಿರುವುದು ಇದೇ ಮೊದಲು. ಸರ್ಕಾರದ ಕಾರ್ಯಸೂಚಿಯನ್ನು ಸಮರ್ಥವಾಗಿ ಎದುರಿಸಲು, ಪಕ್ಷದ ಕಾರ್ಯಕರ್ತರ ತರಬೇತಿ ಕಾರ್ಯಕ್ರಮಕ್ಕೆ ಒತ್ತು ನೀಡಲು ಮತ್ತು ಚುನಾವಣಾ ಹಿನ್ನಡೆಗಳ ನಂತರ ಪಕ್ಷದ ನೀತಿಯನ್ನು ಸಮಾಜದ ತಳಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಲುವಾಗಿ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಪ್ರಯೋಗಗಳು ಅನಿವಾರ್ಯ ಎಂದು ಹೇಳಲಾಗುತ್ತಿದೆ.

Comments are closed.