ರಾಷ್ಟ್ರೀಯ

1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದರೂ ಈ ಭಾಗಗಳಲ್ಲಿ ತ್ರಿವರ್ಣ ಧ್ವಜ ಹಾರಾಡಿರಲಿಲ್ಲ!

Pinterest LinkedIn Tumblr


ಭಾರತ ಇಂದು 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ದೇಶಕ್ಕಾಗಿ ಹೋರಾಡಿದ ಸ್ವತಂತ್ರರು ವೀರಿಗೆ ನಮನ ಸಲ್ಲಿಸಿ ಭಾರತದ ಇತಿಹಾಸವನ್ನು ಮೆಲುಕು ಹಾಕುವುದು ಇಂದಿನ ವಿಶೇಷ. ಕಳೆದ 71 ವರ್ಷಗಳಲ್ಲಿ ಏಳು ಬೀಳಿನ ನಡುವೆ ಭಾರತ ದೇಶ ಪ್ರಗತಿ ಪಥದತ್ತ ಸಾಗಿದೆ. 1947 ಆಗಸ್ಟ್​ 15ರಂದು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಾಡಿದ್ದರೂ, ದೇಶದ ಹಲವು ಭಾಗಗಳಲ್ಲಿ ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿರಲಿಲ್ಲ ಎಂಬುದೇ ವಾಸ್ತವ. ಏಕೆಂದರೆ ಗಣರಾಜ್ಯವಾಗಿರದ ಭಾರತದ ಅನೇಕ ಭಾಗದ ಆಡಳಿತಗಾರರು ಭಾರತದೊಂದಿಗೆ ಗುರುತಿಸಿಕೊಂಡಿರಲಿಲ್ಲ. ಅಂತಹ ಕೆಲವೊಂದು ಐತಿಹಾಸಿಕ ಸ್ಥಳಗಳ ಕಿರು ಪರಿಚಯ ಇಲ್ಲಿದೆ.

ಜಮ್ಮು ಮತ್ತು ಕಾಶ್ಮೀರ
ಸ್ವಾತಂತ್ರ್ಯದ ಸಮಯದಲ್ಲಿ 500ಕ್ಕಿಂತ ಹೆಚ್ಚಿನ ರಾಜ ಸಂಸ್ಥಾನಗಳು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡಿದ್ದರು. ಆದರೆ ಜಮ್ಮು ಮತ್ತು ಕಾಶ್ಮೀರ ಮಾತ್ರ ಈ ಒಕ್ಕೂಟದಿಂದ ಹೊರಗುಳಿದಿತ್ತು. ಜಮ್ಮು-ಕಾಶ್ಮೀರದ ಅಂದಿನ ಮಹಾರಾಜ ಹರಿಸಿಂಗ್ ಅವರು ಪ್ರತ್ಯೇಕತೆಯನ್ನು ಬಯಸಿದ್ದರು. ಒಂದೆಡೆ ಭಾರತ-ಪಾಕ್ ಇಬ್ಭಾಗವಾಗಿದ್ದರೆ ಹರಿಸಿಂಗ್ ತನ್ನದೇ ರಾಷ್ಟ್ರ ಮಾಡಲು ಮುಂದಾಗಿದ್ದರು. 1947 ಆಗಸ್ಟ್ 15ರ ತನಕ ಜಮ್ಮು-ಕಾಶ್ಮೀರ ಮಹರಾಜ ಭಾರತ ಸಂಸ್ಥಾನ ಜೊತೆ ವಿಲೀನವಾಗಿರಲಿಲ್ಲ. ಈ ಕಾರಣಕ್ಕಾಗಿ ಮೊದಲ ಸ್ವಾತಂತ್ರ್ಯ ಸಂಭ್ರಯದಲ್ಲಿ ರಾಜ್ಯದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ. ಸ್ವಾತಂತ್ರ್ಯವಾದ ಬಳಿಕ ಪಾಕಿಸ್ತಾನವು ಕಾಶ್ಮೀರದ ಮೇಲೆ ಮೊದಲ ಬಾರಿಗೆ ದಾಳಿ ಮಾಡಿದಾಗ ಹರಿಸಿಂಗ್ ಭಾರತದ ಸಹಾಯ ಯಾಚಿಸಿದ್ದರು. ಇದಾದ ಬಳಿಕ 1947 ಅಕ್ಟೋಬರ್ 26ರಂದು ಜಮ್ಮು- ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಹೈದರಾಬಾದ್
ಸ್ವಾತಂತ್ರ್ಯ ಹೋರಾಟದಲ್ಲಿ ಹೈದರಾಬಾದ್ ರಾಜರು ಪಾಲ್ಗೊಂಡಿದ್ದರೂ ಮೊದಲ ಸ್ವಾತಂತ್ರ್ಯ ಸಂಭ್ರಮದಿಂದ ದೂರ ಉಳಿದಿದ್ದರು. ಹೈದರಾಬಾದ್ ರಾಜ್ಯವನ್ನು ಆಳುತ್ತಿದ್ದ ನಿಜಾಮ್ ಮಿರ್ ಉಸ್ಮಾನ್ ಅಲಿ ಸ್ವಾತಂತ್ರ್ಯ ಬಳಿಕ ತನ್ನ ರಾಜ್ಯವನ್ನು ಪಾಕಿಸ್ತಾನಕ್ಕೆ ಸೇರಿಸಿಕೊಳ್ಳಲು ಬಯಸಿದ್ದರು. ಹೀಗಾಗಿ ಹೈದರಾಬಾದ್ ನಿಜಾಮ್​ ಭಾರತದ ಜೊತೆ ತನ್ನ ರಾಜ್ಯವನ್ನು ವಿಲೀನಗೊಳಿಸಲು ಒಪ್ಪಿರಲಿಲ್ಲ. 1947 ಆಗಸ್ಟ್​ 15ರವರೆಗೆ ವಿಲೀನ ಒಪ್ಪಂದಕ್ಕೆ ಸಹಿ ಹಾಕಿರದ ಹೈದರಾಬಾದ್ ಸಂಸ್ಥಾನದಲ್ಲಿ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ಇದಾಗಿ ಒಂದು ವರ್ಷಗಳ ಬಳಿಕ ಉಪ ಪ್ರಧಾನಿ ಸರ್ದಾರ್ ವಲ್ಲಭಾಯಿ ಪಟೇಲ್ ಹೈದರಾಬಾದ್​ನ್ನು ಭಾರತಕ್ಕೆ ಸೇರಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಅದರ ಫಲವಾಗಿ 1948 ಸೆಪ್ಟೆಂಬರ್ 13ರಂದು ಭಾರತೀಯ ಸೇನೆಯು ಹೈದರಾಬಾದ್​ನ್ನು ವಶಪಡಿಸಿಕೊಂಡಿತು. ಇದಾದ ಬಳಿಕ ಹೈದರಾಬಾದ್​ನ್ನು ಭಾರತದೊಂದಿಗೆ ವಿಲೀನಗೊಳಿಸಲಾಯಿತು.

ಜುನಾಗಡ್
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಜುನಾಗಡ್​ ರಾಜವಂಶಸ್ಥರು ಭಾರತದೊಂದಿಗೆ ವಿಲೀನಗೊಳ್ಳಲು ಮಾತ್ರ ಮುಂದಾಗಿರಲಿಲ್ಲ. ಭಾರತ-ಪಾಕ್​ ವಿಭಜನೆಯಾದ್ದರಿಂದ ಗುಜರಾತ್​ನ ದಕ್ಷಿಣ ಸೌರಾಷ್ಟ್ರದ ರಾಜವಂಶವು ಪಾಕಿಸ್ತಾನದ ಜೊತೆ ಗುರುತಿಸಿಕೊಳ್ಳಲು ಬಯಸಿದ್ದರು. ಆದರೆ ಅಂದಿನ ರಾಜ ಮೊಹಮ್ಮದ್ ಮಹಾಬತ್ ಖಾಂಜಿಯ ನಿರ್ಧಾರದ ವಿರುದ್ಧ ಅಲ್ಲಿನ ಜನರು ಬಂಡಾಯ ಎದ್ದಿದ್ದರು. ಇದಾದ ಬಳಿಕವಷ್ಟೇ ಜುನಾಗಡ್ ಪ್ರದೇಶವನ್ನು 1947 ಸೆಪ್ಟೆಂಬರ್ 13ರಂದು ಭಾರತದೊಂದಿಗೆ ವಿಲೀನಗೊಳಿಸಲಾಯಿತು.

ಗೋವಾ
1947ರವರೆಗೆ ಭಾರತವನ್ನು ಬ್ರಿಟೀಷರು ಆಳಿದ್ದರೂ ಗೋವಾ ರಾಜ್ಯ ಮಾತ್ರ ಪೋರ್ಚುಗೀಸರ ವಶದಲ್ಲಿತ್ತು. 1947ರಲ್ಲಿ ಭಾರತ ಸ್ವಾತಂತ್ರ್ಯ ದೇಶವಾಗಿ ಹೊರಹೊಮ್ಮಿತು. ಆದರೆ ಭಾರತವನ್ನು ಬಿಟ್ಟು ಹೋಗಲು ಪೋರ್ಚುಗೀಸರು ಮಾತ್ರ ತಯಾರಿರಲಿಲ್ಲ. ಭಾರತೀಯ ಸೈನ್ಯವು ಆಪರೇಷನ್ ವಿಜಯ್ ಎಂಬ ಕಾರ್ಯಾಚರಣೆ ಮೂಲಕ ಗೋವಾ ಮತ್ತು ದಿಯು-ದಮನ್ ದ್ವೀಪಗಳ ಮೇಲೆ ದಾಳಿ ನಡೆಸಿ ಈ ಪ್ರದೇಶಗಳನ್ನು ವಶಪಡಿಸಿಕೊಂಡರು. 1961ರ ಬಳಿಕ ಭಾರತದೊಂದಿಗೆ ವಿಲೀನಗೊಂಡಿದ್ದ ಗೋವಾ ಭಾಗದ ಪ್ರದೇಶಗಳಲ್ಲಿ 14 ವರ್ಷಗಳ ಕಾಲ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿರಲಿಲ್ಲ.

ಪುದುಚೆರಿ
ತಮಿಳಿನಾಡಿನ ಸಮುದ್ರಭಾಗದಲ್ಲಿರುವ ಪುದುಚೆರಿ ಹಲವು ವರ್ಷಗಳ ಕಾಲ ಫ್ರೆಂಚರ ಅಧೀನದಲ್ಲಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಫ್ರೆಂಚರ ಆಳ್ವಿಕೆಯಲ್ಲಿದ್ದ ಈ ಪ್ರದೇಶವನ್ನು 1954 ನವೆಂಬರ್ 1ರಂದು ಭಾರತದ ಗಣರಾಜ್ಯಕ್ಕೆ ಸೇರಿಸಲಾಗಿತ್ತು. ಅಲ್ಲದೆ 1962 ಆಗಸ್ಟ್​ 16ರಂದು ಈ ಪ್ರದೇಶವನ್ನು ಕಾನೂನುಬದ್ಧವಾಗಿ ಭಾರತದ ಕೇಂದ್ರಾಡಳಿತ ಪ್ರದೇಶಕ್ಕೆ ಒಳಪಡಿಸಲಾಯಿತು. 1947ರಲ್ಲಿ ಫ್ರೆಂಚರ ಅಧೀನದಲ್ಲಿದ್ದ ಈ ಪ್ರದೇಶದಲ್ಲಿ ಮೊದಲ ಸ್ವಾತಂತ್ರ್ಯದ ಧ್ವಜಾಹಾರೋಹಣ ನಡೆದಿರಲಿಲ್ಲ.

ಸಿಕ್ಕಿಂ
ಈಶಾನ್ಯ ರಾಜ್ಯವಾಗಿರುವ ಸಿಕ್ಕಿಂನಲ್ಲೂ ಆಗಸ್ಟ್ 15ರಂದು ಮೊದಲ ಸ್ವಾತಂತ್ರ್ಯ ಧ್ವಜಾಹಾರೋಹಣ ನೆರವೇರಿಸಿರಲಿಲ್ಲ. ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶದ ಗಡಿ ಭಾಗ ಹೊಂದಿರುವ ಸಿಕ್ಕಿಂ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದು. ಸ್ವಾತಂತ್ರ್ಯಾ ಸಂಗ್ರಾಮದಲ್ಲಿ ಈ ರಾಜ್ಯದವರು ಭಾಗವಹಿಸಿದ್ದರೂ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಲು ಅಲ್ಲಿನ ರಾಜ ಜೋಗಯಾಲ್ ಒಪ್ಪಿರಲಿಲ್ಲ. 1973ರಲ್ಲಿ ರಾಜವಂಶದ ವಿರುದ್ದ ಅಲ್ಲಿನ ಜನರು ದಂಗೆಯೆದ್ದಿದ್ದರು. 1975ರಲ್ಲಿ ಜನಾಭಿಪ್ರಾಯದ ಆಧಾರದ ಮೇಲೆ ಸಿಕ್ಕಿಂ ಭಾರತದ 22ನೇ ರಾಜ್ಯವಾಗಿ ಸೇರ್ಪಡೆಗೊಂಡಿತು. ಈ ಸಣ್ಣ ರಾಜ್ಯದಲ್ಲೂ 1947ರಲ್ಲಿ ಮೊದಲ ತ್ರಿರಂಗ ಹಾರಿಸಿರಲಿಲ್ಲ.

ನಾಗಾಲ್ಯಾಂಡ್
ಸ್ವಾತಂತ್ರ್ಯ ಭಾರತದಲ್ಲಿ ನಾಗಾಲ್ಯಾಂಡ್​ ಅಸ್ಸಾಂ ಪ್ರಾಂತ್ಯಕ್ಕೆ ಒಳಪಟ್ಟಿತ್ತು. 1947ರಲ್ಲಿ ಭಾರತ ಸ್ವಾತಂತ್ರ್ಯ ಆಚರಣೆಯ ಸಂಭ್ರಮದಲ್ಲಿದ್ದಾಗ ನಾಗಾ ಬಂಡುಕೋರರು ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಡುತ್ತಿದ್ದರು. ಪ್ರತ್ಯೇಕತೆಗಾಗಿ ಹಿಂಸಾಚಾರಕ್ಕಿಳಿದಿದ್ದ ನಾಗಾ ಬಂಡುಕೋರರನ್ನು ಮಟ್ಟ ಹಾಕಲು 1955ರಲ್ಲಿ ಭಾರತೀಯ ಸೈನ್ಯವನ್ನು ಕಳುಹಿಸಲಾಗಿತ್ತು. 1957ರಲ್ಲಿ ಭಾರತ ಸರ್ಕಾರ ನಾಗಾ ರಾಷ್ಟ್ರೀಯ ಮಂಡಳಿ ಸ್ಥಾಪಿಸಿ ನಾಗಾ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆ ನೀಡಿತು. 1960ರಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ನಾಗಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ 16 ಒಪ್ಪಂದಕ್ಕೆ ಸಹಿ ಹಾಕಿದರು. ಇದರ ಬಳಿಕ ನಾಗಾಲ್ಯಾಂಡ್​ಗೆ ಪ್ರತ್ಯೇಕ ರಾಜ್ಯದ ಸ್ಥಾನ ನೀಡಿ ಭಾರತದ ಗಣತಂತ್ರ ಒಕ್ಕೂಟದಲ್ಲಿ ಸೇರಿಸಲಾಯಿತು. ಇಲ್ಲೂ ಕೂಡ 1947 ಆಗಸ್ಟ್ 15ರಂದು ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ.

Comments are closed.