ರಾಷ್ಟ್ರೀಯ

ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ ಎಂಬುದು ಹಿಂದೂ ಧರ್ಮೀಯರ ನಂಬಿಕೆ, ಅದನ್ನು ಕೋರ್ಟ್ ಪ್ರಶ್ನಿಸಬಾರದು; ಸುಪ್ರೀಂ ಮುಂದೆ ವಾದ ಮಂಡನೆ

Pinterest LinkedIn Tumblr

ನವದೆಹಲಿ: ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ ಎಂಬುದು ಹಿಂದೂ ಧರ್ಮೀಯರ ನಂಬಿಕೆ, ಅದರ ವೈಚಾರಿಕತೆ ನೋಡಲು ನ್ಯಾಯಾಲಯವು ಎಲ್ಲೆ ಮೀರಿ ಹೋಗಬಾರದು ಎಂದು ರಾಮ ಲಲ್ಲಾ ವಿರಾಜ್ ಮಾನ್ ಪರ ವಕೀಲ ಸುಪ್ರೀಂ ಕೋರ್ಟ್ ಮುಂದೆ ಬುಧವಾರ ವಾದ ಮಂಡಿಸಿದರು.

ಸುಪ್ರೀಂ ಕೋರ್ಟ್ ನಲ್ಲಿ ಸತತ ಆರು ದಿನಗಳಿಂದ ರಾಜಕೀಯ ಸೂಕ್ಷ್ಮ ಪ್ರಕರಣವಾದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ರಾಮ್ ಲಲ್ಲಾ ವಿರಾಜ್ ಮಾನ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ ಎಸ್ ವೈದ್ಯನಾಥನ್ , ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದ ಮುಂದೆ ವಾದ ಮಂಡಿಸಿದರು.

ರಾಮ ದೇವರ ಜನ್ಮಸ್ಥಳ ಅಯೋಧ್ಯೆ ಎಂದು ಹೇಳುವುದು ಹಿಂದೂಗಳ ನಂಬಿಕೆ, ಇದು ಎಷ್ಟು ತರ್ಕಬದ್ಧ ಎಂದು ನೋಡಲು ನ್ಯಾಯಾಲಯ ಹೋಗಬಾರದು ಎಂದು ಹಿರಿಯ ನ್ಯಾಯವಾದಿ ವೈದ್ಯನಾಥ್ ಹೇಳಿದರು.

ಹಿಂದೂ ಮತ್ತು ಮುಸ್ಲಿಮರು ವಿವಾದಿತ ರಾಮಜನ್ಮಭೂಮಿ -ಬಾಬ್ರಿ ಮಸೀದಿ ಸ್ಥಳವನ್ನು ಜಂಟಿಯಾಗಿ ಹೊಂದಿದ್ದರೆ ಅಲ್ಲಿಂದ ಮುಸ್ಲಿಮರನ್ನು ಓಡಿಸಲು ಹೇಗೆ ಸಾಧ್ಯ ಎಂದು ನ್ಯಾಯಪೀಠ ಕೇಳಿದ ಪ್ರಶ್ನೆಗೆ ವಕೀಲರು ಈ ವಾದ ಮಂಡಿಸಿದರು.

2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ವಿರುದ್ಧವಾಗಿ 14 ಮನವಿಗಳು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದವು. ಅಯೋಧ್ಯೆಯ 2.77 ಎಕರೆ ಜಮೀನನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೊಹಿ ಅಖಾರಾ ಮತ್ತು ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು.

Comments are closed.