ನವದೆಹಲಿ(ಆಗಸ್ಟ್.08): ಯುವಕರಿಗೆ ಮುದುವೆ ಮಾಡಿಸಲು ನಾವೀಗ ಕಾಶ್ಮೀರದಿಂದಲೂ ಕನ್ಯೆ ತರಬಹುದು ಎಂಬ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿಕೆಯೀಗ ಭಾರೀ ವಿವಾದಕ್ಕೀಡಾಗಿದೆ. 370ನೇ ವಿಧಿ ರದ್ದತಿ ಉಲ್ಲೇಖಿಸಿ ಕಾಶ್ಮೀರದ ಹೆಣ್ಣು ಮಕ್ಕಳ ಕುರಿತು ನೀಡಿರುವ ಈ ಬಿಜೆಪಿ ಹಿರಿಯ ನಾಯಕನ ಕೀಳು ಅಭಿರುಚಿಯ ಮಾತುಗಳಿಗೆ, ಕಾಂಗ್ರೆಸ್ ವರಿಷ್ಠ ರಾಹುಲ್ ತಪರಾಕಿ ಬಾರಿಸಿದ್ದಾರೆ.
“ಕಾಶ್ಮೀರಿ ಹೆಣ್ಣು ಮಕ್ಕಳ ಕುರಿತಾದ ಹರಿಯಾಣ ಸಿಎಂ ಹೇಳಿಕೆ ಖಂಡನೀಯ. ಸಂಘ ಪರಿವಾರ ತಮ್ಮ ಕಾರ್ಯಕರ್ತರಿಗೇನು ತರಬೇತಿ ನೀಡಿದೆ ಎಂಬದುಕ್ಕೆ ಖಟ್ಟರ್ ಹೇಳಿಕೆಯೇ ಸಾಕ್ಷಿ. ಇದು ಆರ್ಎಸ್ಎಸ್ ನಾಯಕರ ಸಣ್ಣತನದ ಬುದ್ಧಿ ತೋರುತ್ತದೆ. ಮಹಿಳೆ ಗಂಡಿನ ಸ್ವತ್ತಲ್ಲ” ಎಂದು ರಾಹುಲ್ ಗಾಂಧಿಯವರು ಟ್ವೀಟ್ ಮೂಲಕ ಮನೋಹರ್ ಲಾಲ್ ಖಟ್ಟರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಶನಿವಾರ ಹರಿಯಾಣದ ಫತೇಹಾಬಾದ್ನಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ಭಾಗೀರಥ್ ಜಯಂತಿಯಲ್ಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ಭಾಗಿಯಾಗಿದ್ದರು. ಈ ವೇಳೆ “ನಮ್ಮ ಕ್ಯಾಬಿನೆಟ್ ಸಚಿವ ಓಪಿ ಧಂಕರ್ ಹರಿಯಾಣದಲ್ಲಿ ಲಿಂಗಾನುಪಾತ ಏರಿಳಿತವಾಗಿದೆ, ಇಲ್ಲಿನ ಯುವಕರ ಮದುವೆಗೆ ಬಿಹಾರದ ಹುಡುಗಿಯರನ್ನು ತರಬೇಕು ಎನ್ನುತ್ತಿದ್ದರು. ಆದರೀಗ, ಕಲಂ 370 ತೆರೆವಾಗಿದೆ. ಹೀಗಾಗಿ ನಮ್ಮ ಯುವಕರ ಮದುವೆಗೆ ಕಾಶ್ಮೀರದಿಂದಲೂ ಹೆಣ್ಣುಮಕ್ಕಳನ್ನು ತರಬಹುದು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ಮನೋಹರ್ ಲಾಲ್ ಖಟ್ಟರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. “ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನಮ್ಮನ್ನು ಒಂದಷ್ಟು ಜನ ಅನುಸರಿಸುತ್ತಾರೆ. ಹಾಗಾಗಿ ಯಾವುದೇ ಹೇಳಿಕೆ ನೀಡುವ ಮುನ್ನ ಮತ್ತೊಮ್ಮೆ ಯೋಚಿಸಬೇಕು. ಸದ್ಯ ಖಟ್ಟರ್ ನೀಡಿರುವ ಹೇಳಿಕೆ ಜಮ್ಮು-ಕಾಶ್ಮೀರದ ಜನಕ್ಕಲ್ಲದೇ, ಇಡೀ ದೇಶಕ್ಕೆ ನೋವುಂಟು ಮಾಡಿದೆ” ಎಂದು ಕಿಡಿಕಾರಿದ್ದಾರೆ.
Comments are closed.