ರಾಷ್ಟ್ರೀಯ

ಭಾರೀ ಮಳೆಗೆ ಕೇರಳ ತತ್ತರ; ಸಾವಿನ ಸಂಖ್ಯೆ 22ಕ್ಕೆ ಏರಿಕೆ

Pinterest LinkedIn Tumblr


ತಿರುವನಂತಪುರಂ:ದೇವರನಾಡು ಕೇರಳ ಮತ್ತೆ ವರುಣನ ಆರ್ಭಟಕ್ಕೆ ತತ್ತರಿಸಿಹೋಗಿದ್ದು, ಕೊಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆಗಸ್ಟ್ 11ರವರೆಗೆ ಬಂದ್ ಮಾಡಲಾಗಿದೆ. ವಿಮಾನ ನಿಲ್ದಾಣದ ರನ್ ವೇ ಜಲಾವೃತಗೊಂಡಿದೆ. ಶುಕ್ರವಾರವೂ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ.

ರಾಜ್ಯಾದ್ಯಂತ ಆರ್ಭಟಿಸುತ್ತಿರುವ ಮಳೆ, ಪ್ರವಾಹಕ್ಕೆ ಈವರೆಗೆ 22 ಮಂದಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಇಡುಕ್ಕಿ, ವಯನಾಡ್, ಮಲಪ್ಪುರಂ ಮತ್ತು ಕೋಝೀಕೋಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಆಗಸ್ಟ್ 9ರವರೆಗೆ ಭಾರೀ ಮಳೆಯಾಗಲಿದ್ದು, ಈ ಬಗ್ಗೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.

ಸುಮಾರು 22,165 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಾಜ್ಯಾದ್ಯಂತ 315 ಪರಿಹಾರ ಶಿಬಿರ ತೆರೆಯಲಾಗಿದೆ. ವಯನಾಡ್ ಜಿಲ್ಲೆಯೊಂದರಲ್ಲಿಯೇ 105 ಪರಿಹಾರ ಶಿಬಿರ ಇದ್ದಿರುವುದಾಗಿ ವರದಿ ತಿಳಿಸಿದೆ.

ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದರಿಂದ ಗುಡ್ಡ ಕುಸಿಯುವ ಭೀತಿಯಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಗುರುವಾರ ವಯನಾಡ್ ನ ಪುದುಮಲಾದಲ್ಲಿ ಭೂಕುಸಿತ ಸಂಭವಿಸಿತ್ತು. ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Comments are closed.