ರಾಷ್ಟ್ರೀಯ

ಐಸಿಸ್ ಸೇರಿದ್ದ ಕೇರಳದ ಮತ್ತೊಬ್ಬ ಯುವಕ ಬಲಿ

Pinterest LinkedIn Tumblr


ನವದೆಹಲಿ: ಕಳೆದ ವರ್ಷ ಕೇರಳದಿಂದ ತೆರಳಿ ಐಸಿಸ್ ಸೇರಿದ್ದ ವ್ಯಕ್ತಿ ಅಫ್ಘಾನಿಸ್ತಾನ್- ಅಮೆರಿಕ ಪಡೆಯ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದಾಗಿ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಕಳೆದ 15 ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಐಸಿಸ್ ಸೇರಿ ಸಾವನ್ನಪ್ಪಿರುವ ಕೇರಳದ ಎರಡನೇ ಯುವಕನಾಗಿದ್ದಾನೆ ಎಂದು ವರದಿ ವಿವರಿಸಿದ್ದು, ಸಾವನ್ನಪ್ಪಿದ್ದ ಯುವಕ ಸೈಫುದ್ದೀನ್ ಎಂದು ಗುರುತಿಸಲಾಗಿದೆ. ಕಳೆದ ವರ್ಷ ಕೇರಳದಿಂದ ಹಲವು ಯುವಕರು ಐಸಿಸ್ ಸೇರಲು ಅಫ್ಘಾನಿಸ್ತಾನಕ್ಕೆ ತೆರಳಿದ್ದರು.

ಕೇರಳದ ತಿರುವನಂತಪುರಂದಿಂದ 350 ಕಿಲೋ ಮೀಟರ್ ದೂರದಲ್ಲಿರುವ ಮಲಪ್ಪುರಂನ ನಿವಾಸಿ ಸೈಫುದ್ದೀನ್. ಕೇರಳದ ಮೂರು ಪ್ರಮುಖ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಸಿರಿಯಾ ಮತ್ತು ಇರಾಕ್ ನಲ್ಲಿ ಕಾರ್ಯಾಚರಿಸುತ್ತಿದ್ದ ಉಗ್ರಗಾಮಿ ಐಸಿಸ್ ಸಂಘಟನೆ ಸೇರಿದ್ದರು. ಇವರು ಕಾಬೂಲ್ ನಲ್ಲಿ ಐಸಿಸ್ ಜಾಲ ವಿಸ್ತರಿಸುವ ನೆಲೆಯಲ್ಲಿ ಐಸಿಸ್ ಸೇರಿರುವುದಾಗಿ ವರದಿ ವಿವರಿಸಿದೆ.

ಕೇರಳ ರಾಜ್ಯದಿಂದ ಯುವಕರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಐಸಿಸ್ ಸೇರಲು ಸುಮಾರು 98 ಮಂದಿಯನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ್ದವು. ಈ ವರ್ಷದ ಜೂನ್ ತಿಂಗಳಲ್ಲಿ ಕೇರಳದಿಂದ ತೆರಳಿದ್ದ 38 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದ.

ಸೈಫುದ್ದೀನ್ 2014ರಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿ ಉದ್ಯೋಗಕ್ಕೆ ತೆರಳಿದ್ದ. ಸೈಫುದ್ದೀನ್ ಮೊಬೈಲ್ ಸಂದೇಶದ ಮೂಲಕ ಕುಟುಂಬದ ಸದಸ್ಯರ ಜತೆ ಸಂಪರ್ಕದಲ್ಲಿದ್ದ. ಆದರೆ ತಾನು ಎಲ್ಲಿದ್ದೇನೆ, ಯಾವ ಕೆಲಸ ಮಾಡುತ್ತಿದ್ದೇನೆ ಎಂಬ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ ಎಂದು ವರದಿ ಹೇಳಿದೆ. ಏಪ್ರಿಲ್ ತಿಂಗಳಲ್ಲಿ ತನ್ನ ಸಹೋದರಿ ಜತೆ ತಾನು ಯುಎಇನಲ್ಲಿ ಧಾರ್ಮಿಕ ಸಂಬಂಧಿ ವಿಷಯ ಕಲಿಯುತ್ತಿದ್ದೇನೆ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.

Comments are closed.