ಕರ್ನಾಟಕ

ಜಲಪ್ರಳಯಕ್ಕೆ ನಲುಗಿದೆ ರಾಜ್ಯ!

Pinterest LinkedIn Tumblr


ಉತ್ತರ ಕರ್ನಾಟಕ, ಶಿವಮೊಗ್ಗ,ಉತ್ತರ ಕನ್ನಡ ಹಾಗೂ ಕರಾವಳಿ ಪ್ರದೇಶದಲ್ಲಿ ಕಳೆದ 10 ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆ ಜನಜೀವನವನ್ನೇ ಮುಳುಗಿಸಿದೆ. ಎಲ್ಲ ಚಿಕ್ಕಪುಟ್ಟ ನದಿಗಳು ಮೈತುಂಬಿ ಹರಿದಿದ್ದು, ಕೃಷಿಭೂಮಿ, ಜನವಸತಿ ಪ್ರದೇಶಗಳು ಜಲಾವೃತಗೊಂಡು ಬದುಕು ನರಕವಾಗಿದೆ. ಆದರೆ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಾಪತ್ತೆಯಾಗಿದ್ದು, ಜನರು ಕುತ್ತಿಗೆಯವರೆಗೆ ತುಂಬಿದ ನೀರಿನಲ್ಲಿ ನಿಂತು ಆಹಾರ,ಬಟ್ಟೆ,ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ.

ಹೌದು ರಾಜ್ಯದಲ್ಲಿ ವರುಣ ಆರ್ಭಟ ಅಕ್ಷರಷಃ ನರಕ ಸೃಷ್ಟಿಸಿದೆ. ಎಲ್ಲೆಡೆ ನೀರು ತುಂಬಿಕೊಂಡಿದ್ದು, ವಿದ್ಯುತ್, ಕುಡಿಯುವ ನೀರು, ಆರೋಗ್ಯ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪಡೆಯಲಾಗದೇ ಜನರು ಪರದಾಡುತ್ತಿದ್ದಾರೆ. ಆದರೆ ಸ್ಪಂದಿಸಬೇಕಾದ ಸರ್ಕಾರ ನಿಷ್ಕ್ರಿಯವಾಗಿದ್ದು, ಸಚಿವ ಸಂಪುಟವೂ ಇಲ್ಲ. ಇರುವ ಮುಖ್ಯಮಂತ್ರಿಗಳು ಪರಿಸ್ಥಿತಿಗೆ ಸ್ಪಂದಿಸುವಲ್ಲಿ ವಿಫಲವಾಗಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ಮಾಡಿದ್ದರೂ ಸಂತ್ರಸ್ಥರಿಗೆ ಸಹಾಯಹಸ್ತ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಯಾವುದೇ ಎಮ್​ಎಲ್​ಎಗಳು ಕ್ಷೇತ್ರದತ್ತ ಮುಖಮಾಡುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಮನಬಂದಂತೆ ಪರಿಹಾರ ಕಾರ್ಯ ನಡೆಸುತ್ತಿದ್ದು, ಅಗತ್ಯ ಇರುವವರಿಗೆ ಯಾವುದೇ ಸಹಾಯ ಸಿಗದೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಸ್ಥಿತಿ ಎದುರಾಗಿದೆ.

ಯಾವುದೇ ಶಾಸಕರು ಜನರ ಸಂಕಷ್ಟ ಕೇಳುವುದುಕ್ಕೆ ಧಾವಿಸಿಲ್ಲ. ಸ್ಥಳದಲ್ಲಿ ನಿಂತು ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಸ್ಥಿತಿ ನಿಭಾಯಿಸಬೇಕಾದವರು ಬೆಂಗಳೂರಿನಲ್ಲಿ ಕೂತು ಅಧಿಕಾರಕ್ಕಾಗಿ ಲಾಭಿಯಲ್ಲಿ ತೊಡಗಿದ್ದಾರೆ. ಸಿಎಂ ನಿನ್ನೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರೂ ಬೆಳಗಾವಿಯ ಪ್ರವಾಹ ನಿಯಂತ್ರಿಸಲು ಸಾಧ್ಯವಾಗದೇ ಅಧಿಕಾರಿಗಳು ಕಂಗಾಲಾಗಿದ್ದಾರೆ.

ಬಿಎಸ್​ವೈ ಏಕಾಂಗಿಯಾಗಿ ಝೀರೋ ಟ್ರಾಫಿಕ್​ನಲ್ಲಿ ಓಡಾಡಿ ಸ್ಪಂದಿಸುವಂತೆ ಶೋ ಕೊಡುತ್ತಿದ್ದು, ಉಳಿದವ್ಯಾರು ಪ್ರವಾಹ ಪೀಡಿತರತ್ತ ಮುಖಮಾಡುತ್ತಿಲ್ಲ. ರಾಜ್ಯದಲ್ಲಿ ಸರಕಾರ ಇದ್ಯಾ ಸತ್ತೋಗಿದ್ಯಾ ಎಂದು ಜನರು ಕಣ್ಣೀರಿಡುತ್ತಿದ್ದಾರೆ. ಮತ ಪಡೆಯಲು ಬರುವ ರಾಜಕಾರಣಿಗಳಿಗೆ ಕರುಣೆಯೇ ಇಲ್ವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

Comments are closed.