ದೇಶದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿರುವ ಬಿಜೆಪಿ ಚುನಾವಣೆಯಿಂದ ಚುನಾವಣೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಲೇ ಸಾಗುತ್ತಿದೆ. ಆದರೆ 2018 ಹಾಗೂ 2019 ನೇ ವರ್ಷದಲ್ಲಿ ಈ ಖುಷಿಗಿಂತ ಅಧಿಕವಾದ ದುಃಖವೊಂದು ಬಿಜೆಪಿಯನ್ನು ಕಾಡುತ್ತಿದೆ. ಅದುವೇ ಬಿಜೆಪಿ ಸಾಮ್ರಾಜ್ಯ ಕಟ್ಟಿದ ಹಿರಿಯ ಸಾಲು ಸಾಲು ನಿಧನ.
ಹೌದು ಬಿಜೆಪಿ ಈ ದೇಶದಲ್ಲಿ ತನ್ನದೇ ಆದ ಹೋರಾಟ, ವಿಶಿಷ್ಟ ಸಿದ್ಧಾಂತವನ್ನು ಹೊಂದಿ ಬೆಳೆಯುತ್ತಿರುವ ರಾಷ್ಟ್ರೀಯ ಪಕ್ಷ. ಆರ್ಎಸ್ಎಸ್ ಹಿನ್ನೆಲೆಯಲ್ಲಿ ಬಂದ ಅದೇಷ್ಟೋ ನಾಯಕರು, ಕಟ್ಟಾ ಬಿಜೆಪಿಗರು ಈ ಪಕ್ಷವನ್ನು ಕಟ್ಟಿಬೆಳೆಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸಾಲಾಗಿ ಹಿರಿಯ ನಾಯಕರನ್ನು ಕಳೆದುಕೊಳ್ಳಲಾರಂಭಿಸಿದ್ದು, ಆತಂಕಕ್ಕಿಡಾಗಿದೆ.
ಕಳೆದ 2018 ಹಾಗೂ 19 ಬಿಜೆಪಿಗೆ ಅತ್ಯಂತ ದುಃಖದ ವರ್ಷ. ಹೌದು ಬಿಜೆಪಿಯನ್ನು ಬುಡಮಟ್ಟದಿಂದ ಕಟ್ಟಿಬೆಳೆಸಿದ ಸಂಸ್ಥಾಪಕರಲ್ಲಿ ಒಬ್ಬರಾದ ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 2018 ರ ಅಕ್ಟೋಬರ್ 18 ರಲ್ಲಿ ವಿಧಿವಶರಾದರು. ತೀವ್ರ ಅನಾರೋಗ್ಯ ಹಾಗೂ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ವಾಜಪೇಯಿ ನಿಧನದಿಂದ ಬಿಜೆಪಿ ಅಕ್ಷರಷಃ ಅನಾಥವಾಗಿತ್ತು.
ಇದರ ಬೆನ್ನಲ್ಲೇ, ಅಡ್ವಾಣಿ ದತ್ತುಪುತ್ರ ಎಂದೇ ಕರೆಯಿಸಿಕೊಳ್ಳುತ್ತಿದ್ದ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಮತ್ತು ರಾಜ್ಯದ ನಡುವೆ ಕೊಂಡಿಯಂತಿದ್ದ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಚುನಾವಣೆಗೂ ಮುನ್ನವೇ ಕ್ಯಾನ್ಸರ್ನಿಂದ 2018 ನವೆಂಬರ್ 12 ರಂದು ನಿಧನರಾದರು. ಕೆಲ ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅನಂತಕುಮಾರ್ ನಿಧನದಿಂದ ರಾಜ್ಯ ಹಾಗೂ ಕೇಂದ್ರ ಬಿಜೆಪಿಗೆ ತುಂಬಲಾರದ ನಷ್ಟವಾಗಿತ್ತು. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಅನಂತಕುಮಾರ್ ಕೇಂದ್ರದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
2019 ರ ಆರಂಭದಲ್ಲೇ ಬಿಜೆಪಿ ಮತ್ತೊಂದು ಶಾಕ್ ಎದುರಾಗಿದ್ದು, ಗೋವಾದ ಮಾಜಿ ಸಿಎಂ ಹಾಗೂ ಕೇಂದ್ರದ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನಿಧನ. ಕ್ಯಾನ್ಸರ್ನಿಂದ ಬಳಲುತ್ತಿದ್ದರೂ ಸಚಿವ ಸಂಪುಟ ಸಭೆ ನಡೆಸುತ್ತ ಗೋವಾದ ಪ್ರಗತಿಗೆ ದುಡಿಯುತ್ತಿದ್ದ ಸಿಎಂ ಮನೋಹರ್ ಪರಿಕ್ಕರ್ 2019 ಮಾರ್ಚ್ 17 ರಂದು ಇಹಲೋಕದ ಯಾತ್ರೆ ಮುಗಿಸಿದರು. ಇದು ಬಿಜೆಪಿ ಪಾಲಿಗೆ ನುಂಗಲಾರದ ದುಃಖವಾಗಿತ್ತು.
ಮೋದಿ ಸಚಿವ ಸಂಪುಟ ಸೇರುವ ವ್ಯಕ್ತಿಯಂದೇ ಬಣ್ಣಿಸಲ್ಪಡುತ್ತಿದ್ದ ಪರಿಕ್ಕರ್ ನಿಧನ, ಪಕ್ಷಕ್ಕೆ, ಕಾರ್ಯಕರ್ತರಿಗೆ ಹಾಗೂ ಸಂಘಟನೆಗಳಿಗೆ ತೀವ್ರ ಆಘಾತ ತಂದಿತ್ತು. ಈ ಎಲ್ಲ ಸಾವುಗಳಿಂದ ಚೇತರಿಸಿಕೊಳ್ಳುವ ಮೊದಲೇ ಬಿಜೆಪಿ ಹಿರಿಯಕ್ಕನಂತಿದ್ದ ಅನುಭವಿ ರಾಜಕಾರಣಿ, ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಒಟ್ಟಿನಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಬಿಜೆಪಿ ಪಾಲಿಗೆ ಸೂತಕವನ್ನೇ ತಂದಿತ್ತಿದ್ದು, ಪಕ್ಷವನ್ನು ಕಟ್ಟಿ ಬೆಳೆಸಿದ, ಪಕ್ಷದ ಏಳ್ಗೆಗಾಗಿ ದುಡಿದ ಪ್ರಾಮಾಣಿಕ ರಾಜಕಾರಣಿಗಳನ್ನು ಕಳೆದುಕೊಂಡ ಬಿಜೆಪಿ ಬಡವಾಗಿದ್ದು, ದೇಶದಾದ್ಯಂತ ಸೂತಕದ ವಾತಾವರಣ ಮನೆಮಾಡಿದೆ.
Comments are closed.