ರಾಷ್ಟ್ರೀಯ

ಅತೃಪ್ತರು ತಂಗಿರುವ ಹೋಟೆಲ್‌ ಮುಂದೆ ಕುಳಿತಿದ್ದ ಡಿಕೆ ಶಿವಕುಮಾರ್‌ ಪೊಲೀಸರು ವಶಕ್ಕೆ ! ಮುಂದೆ ಏನೆಲ್ಲ ಆಯಿತು..?

Pinterest LinkedIn Tumblr

ಬೆಂಗಳೂರು: ರಾಜ್ಯ ರಾಜಕೀಯ ಹೈ ಡ್ರಾಮಾ ಮುಂದುವರಿದಿದೆ. ರಾಜೀನಾಮೆಗಳ ಪರಿಶೀಲನೆ, ಸ್ಪೀಕರ್‌ ನಿರ್ಧಾರ ಹಾಗೂ ಶಾಸಕಾಂಗ ಪಕ್ಷದ ಸಭೆ, ಸುದೀರ್ಘ ಸಭೆಗಳಿಗೆ ಮಂಗಳವಾರದ ರಾಜಕೀಯ ಬೆಳವಣಿಗೆ ಸಾಕ್ಷಿಯಾಯಿತು. ಬುಧವಾರ ಅತೃಪ್ತರ ಮನವೊಲಿಕೆ ಪ್ರಹಸನ ಆರಂಭವಾಗಿದ್ದು, ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ಅತೃಪ್ತ ಶಾಸಕರ ಮನವೊಲಿಲು ಮುಂಬಯಿಗೆ ತೆರಳಿ ಸತತ ಆರು ಗಂಟೆಗಳಿಂದ ರೆನೈಸಾನ್ಸ್‌ ಹೋಟೆಲ್‌ ಮುಂದೆಯೇ ಕುಳಿತಿದ್ದ ಡಿಕೆ ಶಿವಕುಮಾರ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದಂತೆ ಡಿಕೆಶಿ ಜತೆ ತೆರಳಿದ್ದ ಜಿಟಿ ದೇವೇಗೌಡ, ಶಿವಲಿಂಗೇಗೌಡ, ಬಾಲಕೃಷ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದಿಲ್ಲ.

ಮುಂಬಯಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆದ ಬೆನ್ನಲ್ಲೇ ಡಿಕೆ ಶಿವಕುಮಾರ್‌ ಅವರನ್ನು ಪೊಲೀಸರು ಬಲವಂತವಾಗಿ ವಾಹನದಲ್ಲಿ ಕೂರಿಸಿ ಕೊಂಡೊಯ್ದರು.

ಕಾಂಗ್ರೆಸ್‌ ನಾಯಕರು ಈಗ ರಾಜಭವನ ಚಲೋಗೆ ಮುಂದಾಗಿದ್ದಾರೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್‌, ದಿನೇಶ್‌ ಗುಂಡೂರಾವ್ ಸೇರಿದಂತೆ ಹಲವಾರು ನಾಯಕರು ಭಾಗಿಯಾಗಿದ್ದಾರೆ. ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರು ಗುಡುಗಿದ್ದಾರೆ.

ಗುಲಾಮ್‌ ನಬಿ ಆಜಾದ್‌ ಮಾತನಾಡಿ, ಬಿಜೆಪಿಯ ಇಂಥ ಧೋರಣೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಬೇಕಾಗಿದೆ ಎಂದರು.

ಹಿರಿಯ ನಾಯಕ ಸಿದ್ದರಾಮಯ್ಯ ಮಾತನಾಡಿ, ಅತೃಪ್ತ ಶಾಸಕರು ಬಿಜೆಪಿಯನ್ನು ನಂಬಿದರೆ ಕೆಟ್ಟವರಾಗುತ್ತೀರಿ. ರಾಜೀನಾಮೆ ಹಿಂಪಡೆದು ಬನ್ನಿ. ಬಿಜೆಪಿಯ ಕುಮ್ಮಕ್ಕು ಇರುವುದು ಜಗಜ್ಜಾಹೀರಾಗಿದೆ ಎಂದು ಗುಟುರು ಹಾಕಿದರು.

ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ ಸಂವಿಧಾನ ನಡೆ ಇಟ್ಟಿದೆ ಎಂದು ಆರೋಪಿಸಿ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಕೂಡ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಂತರ ಬಿಜೆಪಿ ನಾಯಕರ ನಿಯೋಗ ರಾಜಭವನಕ್ಕೆ ತೆರಳಿ ಸ್ಪೀಕರ್‌ ವಿರುದ್ಧ ದೂರು ಸಲ್ಲಿಸಿದೆ.

ರಾಜೀನಾಮೆ ಅಂಗೀಕರಿಸದೆ ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಒಬ್ಬರಿಗೊಂದು, ಇನ್ನೊಬ್ಬರಿಗೊಂದು ಸಮಯ ನೀಡುತ್ತಿದ್ದಾರೆ. ಚೌಕಾಸಿ ರೀತಿ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ಈಗ ಸುಪ್ರೀಂ ಕೋರ್ಟ್‌ ಅಂಗಳಕ್ಕೂ ತಲುಪಿದೆ. ಸ್ಪೀಕರ್‌ ವಿಳಂಬ ನಡೆಯುನ್ನು ಖಂಡಿಸಿ ಅತೃಪ್ತ ಶಾಸಕ ಬಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಗುರುವಾರ ಈ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಅತೃಪ್ತ ಶಾಸಕರ ಬಣದ ಪರವಾಗಿ ಮುಕುಲ್‌ ರೋಹ್ಟಗಿ ವಾದ ಮಂಡಿಸುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಬೆಂಗಳೂರಿನಂದ ಮುಂಬಯಿಗೆ ಉಪಾಹಾರ ಸೇವಿಸಿದ ಡಿಕೆ ಶಿವಕುಮಾರ್‌ ತೆರಳಿದ್ದರು. ಹೋಟೆಲ್‌ ಒಳಗೆ ಹೋಗಲು ಪೊಲೀಸರು ಬಿಡದ ಕಾರಣ ಡಿಕೆ ಶಿವಕುಮಾರ್‌ ಹಾಗೂ ಇತರರು ಹೋಟೆಲ್‌ ಗೇಟ್‌ ಮುಂದೆಯೇ, ಮಳೆಯ ನಡುವೆಯೇ ಉಪಾಹಾರ ಸೇವಿಸಿದ್ದಾರೆ.

ಒಬ್ಬ ಮಾತಾಡಿಲ್ಲ ಅಂದರೆ 10 ಜನ ಇದ್ದಾರೆ: ಡಿಕೆಶಿ ಟಾಂಗ್
ಯಾವುದೇ ಕಾರಣಕ್ಕೂ ಭೇಟಿಯಾಗುವ ಪ್ರಶ್ನೆ ಇಲ್ಲ ಎಂದಿರುವ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿರುವ ಡಿ ಕೆ ಶಿವಕುಮಾರ್, ಒಬ್ಬ ಮಾತಾಡಿಲ್ಲ ಅಂದರೆ 10 ಜನ ಇದ್ದಾರೆ. ನಾನು ಬಂದಿದ್ದು ಒಬ್ಬನೇ, ಹೋಗೋದು ಒಬ್ಬನೇ , ಯಾರಿಗೂ ಹೆದರೋನಲ್ಲ ನಾನು ಎಂದಿದ್ದಾರೆ.

ಯಾವುದೇ ಕಾರಣಕ್ಕೂ ಡಿಕೆಶಿ ಭೇಟಿ ಮಾಡಲ್ಲ, ಇಂದು ಮತ್ತಷ್ಟು ಅತೃಪ್ತರು ಮುಂಬಯಿಗೆ: ರಮೇಶ್ ಜಾರಕಿಹೊಳಿ
ಮುಂಬಯಿಯ ರಿನೈಸೆನ್ಸ್ ಹೋಟೆಲ್ ಮುಂದೆ ಹೈ ಡ್ರಾಮಾ ನಡೆಯುತ್ತಿದ್ದು, ಇತ್ತ ಅತೃಪ್ತರ ಭೇಟಿಗೆ ಡಿಕೆಶಿ ಕಸರತ್ತು ನಡೆಸಿದ್ದರೆ, ನಾವು ಯಾವುದೇ ಕಾರಣಕ್ಕೂ ಡಿ ಕೆ ಶಿವ ಕುಮಾರ್ ಅವರನ್ನು ಭೇಟಿಯಾಗಲ್ಲ ಎಂದು ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಷ್ಟೇ ಅಲ್ಲ ಇವತ್ತು ಮತ್ತಷ್ಟು ಅತೃಪ್ತ ಶಾಸಕರು ನಮ್ಮನ್ನು ಕೂಡಿಕೊಳ್ಳುತ್ತಾರೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಹೋಟೆಲ್‌ನಲ್ಲಿ ಡಿಕೆಶಿ ರೂಂ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ ಹೋಟೆಲ್
ರಿನೈಸೆನ್ಸ್ ಹೋಟೆಲ್‌ನಲ್ಲಿ ಡಿ ಕೆ ಶಿವಕುಮಾರ್ ರೂಂ ಬುಕ್ ಮಾಡಿದ್ದು ಖಚಿತವಾಗಿದೆ. ಮುಂಬರುವ ಅಡೆತಡೆಗಳ ಬಗ್ಗೆ ಲೆಕ್ಕ ಹಾಕಿದ್ದ ಸಚಿವ ಡಿಕೆಶಿ ನಿನ್ನೆಯೇ ರೂಂ ಬುಕ್ ಮಾಡಿದ್ದರು. ಡಿಕೆಶಿ ಅವರ ಹೆಸರಲ್ಲೇ ಡಿಲಕ್ಸ್ ಲೇಕ್ ವೀವ್ ರೂಮ್ ಬುಕ್ ಮಾಡಿರೋ ದಾಖಲೆ ಲಭ್ಯವಾಗಿದೆ. ರೂಮ್ ಬುಕ್ ಮಾನ್ಯ ಮಾಡಿದ್ದ ಹೋಟೆಲ್‌ನವರು ಬಳಿಕ ತುರ್ತುಸ್ಥಿತಿ ಕಾರಣ ನೀಡಿ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅತೃಪ್ತರನ್ನು ಕರೆ ತರಲೇ ಬೇಕು: ಡಿಕೆಶಿಗೆ ಸಿಎಂ ಆದೇಶ
ಡಿಕೆಶಿ ಅವರ ಜತೆ ನಿರಂತರ ಸಂಪರ್ಕದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂಬಯಿಯ ಪ್ರತಿಯೊಂದು ಬೆಳವಣಿಗೆಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಎಷ್ಟೇ ಪ್ರತಿಭಟನೆಗಳು ನಡೆಯಲಿ, ನೀವೇನು ಹೆದರಬೇಕಿಲ್ಲ. ಅತೃಪ್ತರ ಮನವೊಲಿಸಿ ಕರೆತರಲೇ ಬೇಕು ಎಂದು ಡಿಕೆಶಿಗೆ, ಸಿಎಂ ಕಟ್ಟಾಜ್ಞೆ ಹೊರಡಿಸಿದ್ದಾರೆ.

ಹಿಂಬದಿಯಿಂದ ಪರಾರಿ
ಅತೃಪ್ತರ ಮನವೊಲಿಸಲು ಡಿ ಕೆ ಶಿವಕುಮಾರ್ ಮತ್ತು ತಂಡ ಮುಂಬಯಿಗೆ ಬಂದಿಳಿದಿದ್ದು, ಇಂದಿನ ಬೆಳವಣಿಗೆ ಮತ್ತಷ್ಟು ಕುತೂಹಲ ಕೆರಳಿಸಿದೆ. ರಿನೈಸೆನ್ಸ್ ಹೋಟೆಲ್ ಮುಬದಿಯಲ್ಲಿ ನಿಂತು ಡಿಕೆ ಶಿವಕುಮಾರ್ ತಮ್ಮ ಭೇಟಿಗೆ ಕಾಯುತ್ತಿದ್ದುದನ್ನು ಅರಿತ ಅತೃಪ್ತ ಶಾಸಕರು ಹಿಂಬದಿ ಗೇಟ್‌ನಿಂದ ಬೇರೆ ಕಡೆ ಶಿಫ್ಟ್ ಆಗಿದ್ದಾರೆ. ಅವರು ಸೋಫಿಟೆಲ್ ಅಥವಾ ತಾಜ್ ಹೋಟೆಲ್‌ಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ.

ಪೊಲೀಸರಿಂದ ತಡೆ
ಡಿಕೆ ಶಿವಕುಮಾರ್‌, ಎಚ್‌ಡಿ ಕುಮಾರಸ್ವಾಮಿ ಅವರಿಂದ ನಮಗೆ ಬೆದರಿಕೆ ಇದೆ ಎಂದು ಅತೃಪ್ತ ಶಾಸಕರು ಮುಂಬಯಿ ಪೊಲೀಸ್‌ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಶಿವಕುಮಾರ್ ಜತೆಗೆ ಜೆಡಿಎಸ್ ನಾಯಕರಾದ ಜಿ ಟಿ ದೇವೇಗೌಡ ಮತ್ತು ಶಿವಲಿಂಗೇಗೌಡ ಕೂಡ ಇದ್ದು, ಮೂವರು ರಿನೈಸೆನ್ಸ್ ಹೋಟೆಲ್‌ನಲ್ಲಿದ್ದಾರೆ.

ನಮಗೆ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಒತ್ತಡವಿದೆ, ಭದ್ರತೆ ಒದಗಿಸಿ ಎಂದು ಅತೃಪ್ತರು ಮುಂಬಯಿ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹೊಟೇಲ್‌ಗೆ ಭಾರಿ ಭದ್ರತೆ ಒದಗಿಸಲಾಗಿದೆ.

ಮುಂಬಯಿ ಪೊಲೀಸ್, ಸಿಆರ್‌ಪಿಎಫ್ ಭದ್ರತೆ ಬೇಕಾದರೂ ಒದಗಿಸಲಿ, ಅವರ ಕೆಲಸ ಅವರು ಮಾಡುತ್ತಾರೆ. ನಾನು ನನ್ನ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದೇನೆ. ರಾಜಕೀಯದಲ್ಲಿ ಅವರೆಲ್ಲರ ಜತೆ ಉತ್ತಮ ಸಂಬಂಧವಿದೆ. ರಾಜಕೀಯದಲ್ಲಿ ನಾವು ಬಂದಿದ್ದು ಒಟ್ಟಿಗೆ, ಸಾಯೋದು ಒಟ್ಟಿಗೆ. ಅವರು ನನ್ನ ಪಕ್ಷದವರು , ಭೇಟಿಯಾಗುವುದು ನನ್ನ ಜವಾಬ್ದಾರಿ ಎಂದು ಅತೃಪ್ತ ಶಾಸಕರನ್ನು ಭೇಟಿಯಾಗುವ ಮೊದಲು ಡಿಕೆಶಿ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ನಿಯೋಗವನ್ನು ಹೋಟೆಲ್ ಒಳಗೆ ಪ್ರವೇಶಿಸಲು ಮುಂಬಯಿ ಪೊಲೀಸರು ಬಿಡುತ್ತಿಲ್ಲ. ಪೊಲೀಸರ ಜತೆ ಡಿಕೆಶಿ ಚರ್ಚೆ ನಡೆಸಿದ್ದು ನಾನು ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದರೂ ನನಗೆ ಪ್ರವೇಶ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಗೋ ಬ್ಯಾಕ್ ,ಗೋ ಬ್ಯಾಕ್ ಕುಮಾರಸ್ವಾಮಿ, ಡಿಕೆಶಿ
ಡಿಕೆಶಿ ಹೊಟೇಲ್ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅಲ್ಲಿ ನೆರೆದಿದ್ದು ಗೋ ಬ್ಯಾಕ್ ಗೋ ಬ್ಯಾಕ್ ಘೋಷಣೆ ಕೂಗುತ್ತಿದ್ದಾರೆ.

ಎದುರಾಗುವ ಎಲ್ಲ ಸಮಸ್ಯೆಗಳನ್ನು ದಾಟಿ ಟ್ರಬಲ್ ಶೂಟರ್ ಡಿಕೆಶಿ ಮತ್ತವರ ತಂಡ ಅತೃಪ್ತರ ಮನವೊಲಿಸಲು ಸಫಲರಾಗುತ್ತಾರಾ ಎಂದು ಕಾದು ನೋಡಬೇಕಿದೆ.

Comments are closed.