ರಾಷ್ಟ್ರೀಯ

ಅಸ್ಸಾಂ ನಾಗರಿಕರ ನೋಂದಣಿ ವಿಚಾರ : ಒಂದು ಲಕ್ಷಕ್ಕೂ ಅಧಿಕ ಹೆಸರುಗಳ ಕೈಬಿಟ್ಟ ಅಧಿಕಾರಿಗಳು

Pinterest LinkedIn Tumblr

ಗುವಾಹತಿ: ಅಸ್ಸಾಂ ರಾಷ್ಟ್ರೀಯ ನಾಗರಿಕರ ನೋಂದಣಿ ವಿಚಾರ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಕಳೆದ ವರ್ಷ ಪಟ್ಟಿಗೆ ಸೇರ್ಪಡೆಯಾಗಿದ್ದ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಯ ಹೆಸರಗಳನ್ನು ಇದೀಗ ನೂತನ ಪಟ್ಟಿಯಿಂದ ಕೈ ಬಿಡಲಾಗಿದೆ.

ಅಸ್ಸಾಂ ರಾಷ್ಟ್ರೀಯ ನಾಗರಿಕರ ನೋಂದಣಿಗೆ ಸಂಬಂಧಿಸಿದಂತೆ ಬುಧವಾರ ಅಧಿಕಾರಿಗಳು ನೂತನ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ 1,02,462 ಮಂದಿಯ ಹೆಸರುಗಳನ್ನು ಅಧಿಕಾರಿಗಳು ಕೈ ಬಿಟ್ಟಿದ್ದಾರೆ. ಇನ್ನು ಈ 1 ಲಕ್ಷಕ್ಕೂ ಅಧಿಕ ಮಂದಿಯ ಹೆಸರುಗಳನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿದ್ದ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆದರೆ ಪಟ್ಟಿಯಲ್ಲಿದ್ದ ಹೆಸರುಗಳಿಗೆ ಸೂಕ್ತ ದಾಖಲೆಗಳಿಲ್ಲದ ಕಾರಣ ಅಧಿಕಾರಿಗಳು ನೂತನ ಪಟ್ಟಿಯಿಂದ ಈ ಹೆಸರುಗಳನ್ನು ಕೈ ಬಿಟ್ಟಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಜುಲೈ 30ರಂದು ಪಟ್ಟಿ ಬಿಡುಗಡೆಯಾಗಿತ್ತು. ಅಂದೇ ಅಧಿಕಾರಿಗಳು ಈ ಪಟ್ಟಿಯೇ ಅಂತಿಮವಲ್ಲ. ಪಟ್ಟಿಯಲ್ಲಿನ ಹೆಸರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿ ಪಟ್ಟಿಗೆ ಸೇರಿಸುವ ಅಥವ ಪಟ್ಟಿಯಿಂದ ಕೈ ಬಿಡುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದ್ದರು. ಅದರಂತೆ ಕಳೆದ ವರ್ಷ ಜುಲೈ 30ರಂದು ಪಟ್ಟಿಗೆ ಸೇರಿಸಲಾಗಿದ್ದ ಮಂದಿಯ ಪೈಕಿ 1,02,462 ಹೆಸರುಗಳಿಗೆ ಸೂಕ್ತ ದಾಖಲೆಗಳಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎನ್ಆರ್ ಸಿ ವಕ್ತಾರರು, ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ ನಿಯಮಗಳು 2003ರ ಕ್ಲಾಸ್ 5ರ ಅಡಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕಳೆದ ವರ್ಷ ಜುಲೈ 30ರಂದು ಸುಮಾರು 3.29 ಕೋಟಿ ಅರ್ಜಿಗಳ ಪೈಕಿ 2.9 ಮಂದಿಯ ಅರ್ಜಿಗಳನ್ನು ಅನುಮೋದಿಸಿ, ಅವರ ಹೆಸರುಗಳನ್ನು ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ಇನ್ನು ತೀವ್ರ ಸುದ್ದಿಗೆ ಗ್ರಾಸವಾಗಿರುವ ಅಸ್ಸಾಂ ಎನ್ ಆರ್ ಸಿ ವಿಚಾರವನ್ನು ಖುದ್ಧು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿದ್ದು, ಕರಡಿನ ಅಂತಿಮ ಪಟ್ಟಿ ಜುಲೈ 31ರಂದು ಬಿಡುಗಡೆ ಮಾಡಲಾಗುತ್ತದೆ.

Comments are closed.