ರಾಷ್ಟ್ರೀಯ

ವಿಚ್ಚೇದನ ಕೇಳಿದ ಪತಿಯಿಂದ ಮತ್ತೊಂದು ಮಗು ಬೇಕೆಂದ ಮಹಿಳೆ ! ಕೋರ್ಟ್ ಹೇಳಿದ್ದೇನು..?

Pinterest LinkedIn Tumblr

ನಾಂದೇಡ್: ವಿಚ್ಚೇದನ ಕೊಡಿಸಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ ಪತಿಯಿಂದ ತನಗೆ ಮತ್ತೊಂದು ಮಗು ಬೇಕೆಂದು ಮಹಿಳೆಯೊಬ್ಬರು ಕೌಟುಂಬಿಕ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ಮಹಾರಾಷ್ಟ್ರದ ನಾಂದೇಡ್ ನಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ತನ್ನ ಪತ್ನಿಯ ಕ್ರೂರತೆಯನ್ನು ತಡೆಯಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ವಿಚ್ಚೇದನ ನೀಡಬೇಕೆಂದು ವ್ಯಕ್ತಿಯೊಬ್ಬರು 2017 ರಲ್ಲಿ ಕೋರ್ಟ್ ಮೊರೆ ಹೋಗಿದ್ದರು. ಈಗ ಮಹಿಳೆ ಪತಿಯಿಂದ ತನಗೆ ಮತ್ತೊಂದು ಮಗು ಪಡೆಯಲು ಅವಕಾಶ ನೀಡಬೇಕೆಂದು ಅದೇ ಕೋರ್ಟ್ ಗೆ ಮೊರೆ ಹೋಗಿದ್ದಾರೆ.

ಮಹಿಳೆಯ ಮನವಿಯನ್ನು ಕೋರ್ಟ್ ಕೂಡಾ ಮಾನ್ಯ ಮಾಡಿದ್ದು, ಮಹಿಳೆಯ ಗರ್ಭ ಧಾರಣೆಯ ಹಕ್ಕನ್ನು ಎತ್ತಿ ಹಿಡಿದಿದೆ. ಆದರೆ ಕೋರ್ಟ್ ತನ್ನ ಪತ್ನಿಯ ಮನವಿಯನ್ನು ಪುರಸ್ಕರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪತಿ, ವಿಚ್ಚೇದನ ಪಡೆಯಲು ಮುಂದಾಗಿರುವ ವ್ಯಕ್ತಿಯಿಂದ ಮತ್ತೊಂದು ಮಗು ಕೇಳುವುದು ಸಾಮಾಜಿಕ ನಿಯಮಗಳಿಗೆ ವಿರುದ್ಧವಾದದ್ದು ಎಂದು ವಾದಿಸಿದ್ದಾರೆ.

ಆದರೆ ಕೋರ್ಟ್ ಮಾತ್ರ ಮಹಿಳೆಯ ಕೋರಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಕೃತಕ ಗರ್ಭಧಾರಣೆ ತಂತ್ರಜ್ಞಾನ ತಜ್ಞರೊಂದಿಗೆ (ಎಟಿಆರ್ ತಜ್ಞರೊಂದಿಗೆ) ಸಮಾಲೋಚನೆಗೆ ದಂಪತಿಗಳನ್ನು ಕಳಿಸಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಕೋರ್ಟ್ ಎಟಿಆರ್ ನೊಂದಿಗೆ ಸಮಾಲೋಚನೆಗೆ ಕಳಿಸಿದ್ದರೂ ಎರಡನೇ ಮಗು ಪಡೆಯುವುದಕ್ಕೆ ಪತಿಯ ಸಮ್ಮತಿ ಅಗತ್ಯವೆಂದು ಹೇಳಿದೆ.

ವಿಚ್ಚೇದನಕ್ಕೆ ಪತಿ ಅರ್ಜಿ ಸಲ್ಲಿಸಿದ್ದಾಗ ನಮ್ಮನ್ನು ಒಗ್ಗೂಡಿಸಬೇಕೆಂದು ಮಹಿಳೆ ಕೋರ್ಟ್ ಗೆ ಮನವಿ ಮಾಡಿದ್ದರು. ಈ ನಂತರ ಋತು ಚಕ್ರ ನಿಲ್ಲುವುದಕ್ಕೂ ಮುನ್ನ ಪತಿಯಿಂದ ದೈಹಿಕ ಸಂಪರ್ಕದಿಂದ ಅಥವಾ ಕೃತಕ ಗರ್ಭಧಾರಣೆಯಿಂದ ಎರಡನೇ ಮಗು ಹೊಂದಲು ಅವಕಾಶ ಕೊಡಿಸಬೇಕೆಂದು ಮಹಿಳೆ ಕೋರ್ಟ್ ಮೊರೆ ಹೋಗಿದ್ದಾರೆ.

Comments are closed.