ರಾಷ್ಟ್ರೀಯ

ಗೃಹ ಸಚಿವ ಅಮಿತ್ ಶಾರಿಂದ ಹಿಜ್ಬುಲ್​ನ ರಿಯಾಜ್​, ಎಲ್​ಇಟಿಯ ಒಸಮಾ ಸೇರಿ 10 ಮಂದಿ ಕುಖ್ಯಾತ ಉಗ್ರರ ಪಟ್ಟಿ ಸಿದ್ಧ

Pinterest LinkedIn Tumblr


ನವದೆಹಲಿ: ಕೇಂದ್ರ ಗೃಹ ಸಚಿವರಾಗಿ ಪದಗ್ರಹಣ ಮಾಡಿರುವ ಅಮಿತ್ ಶಾ ಅವರು ಕಾಶ್ಮೀರ ಕಣಿವೆ ಭಾಗದ ಹತ್ತು ಮಂದಿ ಕುಖ್ಯಾತ ಉಗ್ರರ ಹೆಸರನ್ನು ಪಟ್ಟಿ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಹಿಜ್ಬುಲ್​ ಮುಜಾಯಿದ್ದೀನ್​ ಸಂಘಟನೆ ಮುಖ್ಯಸ್ಥ ರಿಯಾಜ್ ನೈಕೋ, ಲಷ್ಕರ್-ಇ-ತೋಯ್ಬಾದ ಜಿಲ್ಲಾ ಕಮಾಂಡರ್ ವಾಸೀಂ ಅಹ್ಮದ್​ ಅಲಿಯಾಸ್ ಒಸಾಮಾ ಮತ್ತು ಹಿಜ್ಬುಲ್​ನ ಆಶ್ರಫ್​ ಮೌಲ್ವಿ ಮುಂತಾದ ಅಪಾಯಕಾರಿ ಉಗ್ರರ ಹೆಸರುಗಳು ಇವೆ.

ಸೇನೆ ನೀಡಿದ ಮಾಹಿತಿ ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ. ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಭಯೋತ್ಪಾದಕರು ಮತ್ತು ಹಿಜ್ಬುಲ್​ ಮುಜಾಯಿದ್ದೀನ್, ಲಷ್ಕರ್-ಇ-ತೋಯ್ಬಾ, ಜೈಷ್-ಇ-ಮೊಹಮ್ಮದ್​ ಮತ್ತು ಎಐ ಸಂಘಟನೆಗಳಿಗೆ ಸೇರಿದ ಹಲವು ಉಗ್ರರು ಈ ಪಟ್ಟಿಯಲ್ಲಿದ್ದಾರೆ.

ಬಾರಾಮುಲ್ಲಾದ ಹಿಜ್ಬುಲ್​ ಮುಜಾಯಿದ್ದೀನ್​ ಸಂಘಟನೆಯ ಜಿಲ್ಲಾ ಕಮಾಂಡರ್ ಮೆಹಾರ್ಜುದ್ದಿನ್​, ಶ್ರೀನಗರದಲ್ಲಿ ಹಿಜ್ಬುಲ್​ ಮುಜಾಯಿದ್ದೀನ್ ಸಂಘಟನೆಗೆ ಸದಸ್ಯರನ್ನು ಸೇರಿಸಲು ಪ್ರಯತ್ನಿಸುತ್ತಿರುವ ಡಾ.ಸೈಫುಲ್ಲಾ ಅಲಿಯಾಸ್ ಸೈಫುಲ್ಲಾ ಮಿರ್ ಅಲಿಯಾಸ್ ಡಾ.ಸೈಫ್​, ಪುಲ್ವಾಮಾ ಜಿಲ್ಲೆಯ ಹಿಜ್ಬುಲ್ಲಾ ಮುಜಾಯಿದ್ದೀನ್​ ಕಮಾಂಡರ್ ಅರ್ಷದ್ ಉಲ್​ ಹಕ್​, ಜೈಷ್​-ಇ-ಮೊಹಮ್ಮದ್​ನ ಕಮಾಂಡರ್​ ಹಫೀಜ್​ ಓಮರ್, ಜೈಷ್​-ಇ-ಮೊಹಮ್ಮದ್​ ಸಂಘಟನೆಗೆ ಸೇರಿದ ಜಾಹೀದ್ ಶೈಕ್ ಅಲಿಯಾಸ್ ಓಮರ್ ಅಘ್ಘಾನಿ, ಅಲ್​-ಬಾದರ್ ಸಂಘಟನೆಗೆ ಸೇರಿದ ಶಕೀಬ್​ ಅಲಿಯಾಸ್ ಮುಸಾಬ್ ಮತ್ತು ಇತ್ತೀಚೆಗೆ ಹಿಜ್ಬುಲ್​ ಮುಜಾಯಿದ್ದೀನ್​ ಸಂಘಟನೆಗೆ ಕುಪ್ವಾರ ಜಿಲ್ಲೆಯ ಕಮಾಂಡರ್ ಆಗಿ ನೇಮಕಗೊಂಡಿರುವ ಇಜಾಜ್​ ಅಹ್ಮದ್​ ಮಲ್ಲಿಕ್​ ಇವರುಗಳ ಹೆಸರನ್ನು ಪಟ್ಟಿ ಮಾಡಲಾಗಿದೆ.

ಕಣಿವೆ ರಾಜ್ಯದಲ್ಲಿ ಈ ವರ್ಷ 102 ಉಗ್ರರನ್ನು ಕೊಲ್ಲಲಾಗಿದೆ. ಇನ್ನೂ 286 ಮಂದಿ ಉಗ್ರರು ಕಾರ್ಯನಿರತರಾಗಿದ್ದಾರೆ ಎಂದು ತಿಳಿದುಬಂದಿರುವುದಾಗಿ ಗೃಹ ಸಚಿವಾಲಯ ಹೇಳಿದೆ.

ಅಧಿಕಾರವನ್ನು ವಹಿಸಿಕೊಂಡ ಕೂಡಲೇ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮಿರದ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್ ಅವರನ್ನು ಭೇಟಿ, ಸಭೆ ನಡೆಸಿದರು. ರಾಜ್ಯದ ರಕ್ಷಣೆಯ ಪರಿಸ್ಥಿತಿಯನ್ನು ರಾಜ್ಯಪಾಲರು ಗೃಹಸಚಿವರಿಗೆ ವಿವರಿಸಿದರು. ಸದ್ಯ ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.

15 ನಿಮಿಷಗಳ ಅವಧಿಯ ಈ ಸಭೆಯಲ್ಲಿ ರಾಜ್ಯಪಾಲರು ಗೃಹಸಚಿವರೊಂದಿಗೆ ಅಮರನಾಥ ಯಾತ್ರೆಯ ಸಿದ್ಧತೆ ಬಗ್ಗೆಯೂ ತಿಳಿಸಿದರು. 46 ದಿನಗಳ ಕಾಲ ನಡೆಯುವ ಯಾತ್ರೆ ಜುಲೈ 1ರಿಂದ ಆರಂಭಗೊಂಡು ಆಗಸ್ಟ್​ 15ರ ಶ್ರಾವಣ ಪೂರ್ಣಿಮಾದಂದು ಮುಕ್ತಾಯಗೊಳ್ಳಲಿದೆ.

ಸಂವಾದ ವೇಳೆ ಜಮ್ಮು ಮತ್ತು ಕಾಶ್ಮೀರದ ಕಾನೂನು ಸುವ್ಯವಸ್ಥೆ ಹಾಗೂ ಗಡಿ ಭಾಗದ ಹಲವು ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ರಕ್ಷಣೆ ವಿಷಯ ಮತ್ತು ಅಭಿವೃದ್ಧಿ ವಿಚಾರವಾಗಿ ನಾನು ಗೃಹಸಚಿವರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ರಾಜ್ಯಪಾಲ ಮಲ್ಲಿಕ್ ಸಭೆ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Comments are closed.