ನವದೆಹಲಿ: ಬಿಸಿಲ ಬೇಗೆಗೆ ಭಾರತ ತತ್ತರಿಸಿದೆ. ಉತ್ತರ ಭಾರತವಂತೂ ಅಕ್ಷರಶಃ ಕುದಿಯುವ ನೀರಿನ ಪಾತ್ರೆಯಂತಾಗಿದೆ. ರಾಜಸ್ಥಾನದಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. ಅಲ್ಲಿನ ಜನರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾದು ಕೂತಿದ್ದಾರೆ.
ರಾಜಸ್ಥಾನದ ಚುರುದಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇತಿಹಾಸದಲ್ಲಿ ದಾಖಲಾದ ಗರಿಷ್ಠ ತಾಪಮಾನ ಇದಾಗಿದೆ. ಇನ್ನು ಗಾಂಧೀನಗರ 49, ಬಿಕಾನೇರ್ 47.9, ಜೈಸಲ್ಮೇರ್ನಲ್ಲಿ 47.2 ಹಾಗೂ ಕೋಟಾದಲ್ಲಿ 46 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜೋದ್ಪುರದಲ್ಲಿ 45.6, ಬರ್ಮೇರ್ನಲ್ಲಿ 44.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.
ಬಿಸಿ ಗಾಳಿಗೆ ರಾಜಸ್ಥಾನ ತತ್ತಿರಿಸಿದೆ. ರಾಜಸ್ಥಾನದಲ್ಲಿ ತಾಪಮಾನ ಮಿತಿಮೀರಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಇದೇ ಹವಾಮಾನ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದೆ. ಈ ಭಾಗದಲ್ಲಿ ಅನೇಕರು ಅಸ್ವಸ್ಥಗೊಂಡಿದ್ದಾರೆ. ಜಮ್ಮುವಿನಲ್ಲಿ 43.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಕರ್ನಾಟಕದಲ್ಲೂ ಬಿಸಿಲ ಅಬ್ಬರ ಜೋರಿದೆ. ವಿಜಯಪುರದಲ್ಲಿ 41 ಡಿ.ಸೆ. ಹಾಗೂ ಕಲಬುರ್ಗಿಯಲ್ಲಿ 42 ಡಿ.ಸೆ. ಉಷ್ಣಾಂಶ ದಾಖಲಾಗಿದೆ.
Comments are closed.