ನವದೆಹಲಿ: ಇಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಎರಡನೇ ಬಾರಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದಲ್ಲಿರುವ ಎಲ್ಲಾ ಪಕ್ಷದ ನಾಯಕರು, ವಿದೇಶದ ಹಲವು ನಾಯಕರ ಸಮ್ಮುಖದಲ್ಲಿ ಮೋದಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಗಣ್ಯರ ನಡುವೆ ಒಂದು ಮುಖ ಮಾತ್ರ ಮಾಯವಾಗಿತ್ತು. ಅದು ಬೇರಾರೂ ಅಲ್ಲ, ಪ್ರಧಾನಿ ಮೋದಿ ತಾಯಿ ಹೀರಾಬೇನ್(98).
ಗುಜರಾತ್ನ ಗ್ರಾಮವೊಂದರಲ್ಲಿ ಕೂತು ಹೀರಾಬೇನ್ ಮಗನ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನ ಕಣ್ತುಂಬಿಕೊಂಡರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾವಿಧಿ ಬೋಧಿಸುವಾಗ ಚಪ್ಪಾಳೆ ತಟ್ಟಿ ಸಂಭ್ರಮಪಟ್ಟ ಹೀರಾಬೇನ್, ದೂರಿಂದಲೇ ಮಗನನ್ನು ನೋಡಿ ಆಶೀರ್ವದಿಸಿದರು.
ದೇಶದಲ್ಲಿ ಬಿಜೆಪಿ ಭರ್ಜರಿ ಗೆಲುವು ಕಂಡನಂತರ ಮೋದಿ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಬಂದಿದ್ದರು. ಅಲ್ಲದೇ ಇದಕ್ಕಿಂತ ಮೊದಲು ಎಲೆಕ್ಷನ್ ದಿನ ವೋಟ್ ಹಾಕಿ ಬಂದ ಹೀರಾಬೇನ್, ಮೋದಿ ಸಾಹೇಬ್ರು ದೇಶಕ್ಕಾಗಿ ದುಡಿದಿದ್ದಾರೆ. ಇನ್ನು ಮುಂದೆ ಕೂಡ ದೇಶದ ಉನ್ನತಗಾಗಿ ಶ್ರಮಿಸುತ್ತಾರೆಂದು ಹೇಳಿದ್ದರು.
ಇನ್ನು ಇಂದು ಫೇಸ್ಬುಕ್, ವಾಟ್ಸಪ್ ಎಲ್ಲಿ ನೋಡಿದರೂ, ಈ ಫೋಟೋ ನಿಮಗೆ ಕಾಣ ಸಿಗತ್ತೆ. ದೂರದಿಂದಲೇ ಮಗನ ಪಟ್ಟಾಭಿಷೇಕ ನೋಡಿ ಖುಷಿ ಪಟ್ಟ ತಾಯಿಯ ಸಂಭ್ರಮ ಎಲ್ಲೆಡೆ ಮನೆಮಾತಾಗಿದೆ.