ಬೆಂಗಳೂರು: “ದೇಶದ ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನು ವಿರೋಧ ಪಕ್ಷಗಳು ಮತ ಬ್ಯಾಂಕ್ಗಾಗಿ ಬಳಸಿಕೊಳ್ಳುತ್ತಿವೆ. ಎಲ್ಲಾ ವರ್ಗದ ಬಡವರಂತೆಯೇ ಅಲ್ಪಸಂಖ್ಯಾತರನ್ನು ವಂಚಿಸಲಾಗಿದೆ. ನಾವು ಮುಸ್ಲಿಂ ಸಮುದಾಯದ ನಂಬಿಕೆ ಗಳಿಸಬೇಕಿದೆ. ಮುಂದಿನ ದಿನಗಳಲ್ಲಿ ನಾವು ಈ ಸಮುದಾಯದ ಅಭಿವೃದ್ದಿಗಾಗಿ ಶ್ರಮಿಸಬೇಕಿದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಜನಪ್ರತಿನಿಧಿಗಳಿಗೆ ತಿಳಿಸಿದರು.
ಇಂದು ಎನ್‌ಡಿಎ ಮೈತ್ರಿಕೂಟದ ಸಂಸದೀಯ ಮಂಡಳಿ ನಾಯಕನಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಶನಿವಾರ ಸಂಜೆಯೇ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಎನ್ ಡಿಎ ಮೈತ್ರಿಕೂಟದ ಸಂಸದರು ಸರ್ವಾನುಮತದಿಂದ ಮೋದಿಯವರನ್ನು ಆಯ್ಕೆ ಮಾಡಿದ್ದಾರೆ. ಮೈತ್ರಿಕೂಟದ ಮಿತ್ರ ಪಕ್ಷದ ಮುಖಂಡ ನಿತೀಶ್ ಕುಮಾರ್ ಅವರು ನರೇಂದ್ರ ಮೋದಿ ಅವರ ಹೆಸರನ್ನು ಅನುಮೋದಿಸಿದರು. ನಂತರ ಸರ್ವಾನು ಮತದಿಂದ ಜಯಘೋಷಗಳೊಂದಿಗೆ ಮೋದಿ ಅವರ ಹೆಸರನ್ನು ಪ್ರಕಟಿಸಲಾಯಿತು.
ಎನ್ ಡಿಎ ಮೈತ್ರಿಕೂಟದ ಎಲ್ಲಾ ಸಂಸದರು ಸಭೆಯಲ್ಲಿ ಭಾಗಿಯಾಗಿದ್ದರು. ಆಯ್ಕೆಯಾದ ನಂತರ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರ ಕಾಲಿಗೆ ಎರಗಿದ ನರೇಂದ್ರ ಮೋದಿ ಅವರು ಅವರಿಂದ ಆಶೀರ್ವಾದ ಪಡೆದರು. ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಅಮಿತ್ ಷಾ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ನರೇಂದ್ರ ಮೋದಿ ಅವರು ಸಂಸದರನ್ನು ಉದ್ದೇಶಿಸಿ ಮಾತನಾಡಿದರು.
ಇಲ್ಲಿನ ಸಭೆಯನ್ನುದ್ದೇಶಿಸಿ ಮಾತಾಡಿದ ಪ್ರಧಾನಿ ಮೋದಿಯವರು, ಸಂಸದೀಯ ನಾಯಕನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ನಾನು ನಿಮಗೆಲ್ಲರಿಗೂ ಆಭಾರಿಯಾಗಿದ್ದೇನೆ. ನವಭಾರತದ ನಮ್ಮ ಸಂಕಲ್ಪ ವಿನೂತನವಾಗಿ ಆರಂಭವಾಗಲಿದೆ. ಇಡೀ ವಿಶ್ವವೇ ಭಾರತದ ಚುನಾವಣೆಯನ್ನು ನೋಡುತ್ತಿತ್ತು. ಈ ಬದಲಾವಣೆ ಪ್ರಕ್ರಿಯೆಯಲ್ಲಿ ನೀವೆಲ್ಲ ಭಾಗಿಯಾಗಿದ್ದೀರಿ ಎನ್ನುವ ಮೂಲಕ ಮೊದಲ ಬಾರಿಗೆ ಆಯ್ಕೆಯಾಗಿ ಬಂದವರಿಗೆ ಅಭಿನಂದನೆ ಸಲ್ಲಿಸಿದರು.
ಹಾಗೆಯೇ ಭಾರತ ಪ್ರಜಾತಂತ್ರದ ಉತ್ಸವ ವಿಶ್ವದ ಮುಂದೆ ಪ್ರತಿಷ್ಠೆಯಾಗಿ ನಿಲ್ಲಿಸಬೇಕು. ಚುನಾವಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ. ಜನಾದೇಶ ನಮ್ಮ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸಿದೆ. ಈ ಜವಾಬ್ದಾರಿ ಎಲ್ಲರೂ ಸಮರ್ಥವಾಗಿ ನಿಭಾಯಿಸಬೇಕು. ದೇಶದ ರಾಜಕೀಯದಲ್ಲಿ ಬದಲಾವಣೆ ಬಂದಿದೆ. ಅಧಿಕಾರ ಮತದಾರರ ಮೇಲೆ ಎಂದೂ ಪ್ರಭಾವಿಸಲ್ಲ. ಜನ ನಮ್ಮನ್ನು ಆರಿಸಿದ್ದು ನಮ್ಮ ಸೇವಾಭಾವ ನೋಡಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೀಗೆ ಮಾತು ಮುಂದುವರೆಸಿದ ಪ್ರಧಾನಿ, ನನ್ನ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಯ ಒಂದು ಭಾಗ. ನಾನು ಕೂಡ ನಿಮ್ಮಂತೆಯೇ ಓರ್ವ ಸಂಸದ. ಮತದಾರರ ಪ್ರಬುದ್ಧತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಸ ನಾಯಕತ್ವವನ್ನು ದೇಶದ ಜನ ಗುರುತಿಸಿದ್ದಾರೆ. ದೇಶದ ಜನ ಸಕಾರಾತ್ಮಕವಾಗಿ ಮತದಾನ ಮಾಡಿದ್ದಾರೆ. ದೇಶದಲ್ಲಿ ಉತ್ತಮ ಕೆಲಸಗಳಾಗಬೇಕೆಂದು ಜನ ಬೆಂಬಲ ಸಿಕ್ಕಿದೆ. ದೇಶದ ಅಭಿವೃದ್ಧಿ ಕನಸಿಗೆ 130 ಕೋಟಿ ಜನರಿಂದ ಸಾಥ್ ನೀಡಿದ್ಧಾರೆ ಎಂದರು.
ಹೆಗಲಿಗೆ ಹೆಗಲು ಕೊಟ್ಟು ನಾವೆಲ್ಲರೂ ಮುನ್ನಡೆಯಬೇಕು. 17 ರಾಜ್ಯಗಳು ಶೇ.50 ಮತಗಳನ್ನು ಈ ಬಾರಿ ನೀಡಿದ್ದಾರೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ವಿಶ್ವವೇ ಮೆಚ್ಚಿದೆ. ಈ ಚುನಾವಣೆ ನನ್ನ ಪಾಲಿಗೆ ಮಹಾ ತೀರ್ಥಯಾತ್ರೆ. ಈ ಚುನಾವಣೆಯಲ್ಲಿ ಮಹಿಳೆಯರಿಂದ ಹೆಚ್ಚು ಮತದಾನ ಆಗಿದೆ. ಮಹಿಳೆಯರು, ತಾಯಂದಿರು ಹೆಚ್ಚು ಆಶೀರ್ವದಿಸಿದ್ದಾರೆ. ಪ್ರಚಾರದ ವೇಳೆ ಜನರಲ್ಲಿ ಮತ ಕೇಳಲು ಹೋಗ್ತಿರಲಿಲ್ಲ. ಜನರಲ್ಲಿ ಆಶೀರ್ವಾದ ಕೇಳಲು ಹೋಗುತ್ತಿದ್ದೆ ಎಂದು ಹೇಳಿದರು.
2014ರಲ್ಲಿ ಬಿಜೆಪಿಗಿದ್ದ ಮತದಾನ ಪ್ರಮಾಣ ಹೆಚ್ಚಾಗಿದೆ. 2019ರಲ್ಲಿ ಶೇ.25ರಷ್ಟು ಮತದಾನ ಪ್ರಮಾಣ ಹೆಚ್ಚಿದೆ. ಪ್ರಾದೇಶಿಕ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಅಡ್ವಾಣಿಯವರು ಘಟಬಂಧನ್ ಯಶಸ್ವಿಯಾಗಿ ಮುನ್ನಡೆಸಿದ್ರು. ದೇಶದಲ್ಲಿ ಘಟಬಂಧನ್ ತಾತ್ಕಾಲಿಕ ಗುಂಪು ಆಗುವುದಿಲ್ಲ. ಮಿತ್ರಪಕ್ಷಗಳು ರಾಜಕೀಯ ಬಲ ನೀಡುತ್ತವೆ ಎಂದು ತಿಳಿಸಿದರು.
ಯಶ್ವಸಿ ಮೈತ್ರಿಕೂಟಕ್ಕೆ ಎನ್ಡಿಎ ಉದಾಹರಣೆಯಾಗಿದೆ. ದೇಶ ಪರಿಶ್ರಮ, ಪ್ರಾಮಾಣಿಕತೆಯನ್ನು ಗೌರವಿಸುತ್ತದೆ. ಹೊಸದಾಗಿ ಆಯ್ಕೆಯಾದವರಿಗೆ ಹೆಸರು ಮಾಡುವ ಆಸೆಯಿದೆ. ನೀವು ಮಾಡುವ ಕಾಯಕದಿಂದ ಖ್ಯಾತಿ ಗಳಿಸಿಕೊಳ್ಳಿ ಎಂದು ಮೊದಲ ಬಾರಿ ಆಯ್ಕೆಯಾದವರಿಗೆ ಮೋದಿ ಕಿವಿಮಾತು ಹೇಳಿದರು.
ಮೋದಿ ಸರ್ಕಾರದಲ್ಲಿ ಮಂತ್ರಿಯಾಗುವ ಕನಸಿರುತ್ತೆ. ಮಂತ್ರಿ ಸ್ಥಾನದ ಬಗ್ಗೆ ಮಾತುಗಳು ಕೇಳಿ ಬರುತ್ತವೆ. ಯೋಚಿಸಬೇಡಿ, ನಿಮಗೆ ಮಂತ್ರಿ ಸ್ಥಾನ ಸಿಗುತ್ತದೆ. ಇಡೀ ದೇಶ ನಿಮ್ಮನ್ನು ನೋಡುತ್ತಿರುತ್ತದೆ, ಎಚ್ಚರ. ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಎಚ್ಚರವಹಿಸಿ. ಮೋದಿಯಿಂದ ಆಯ್ಕೆಯಾಗಿದ್ದೇವೆಂಬ ಭಾವನೆ ಬೇಡ. ಜನಾದೇಶವನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಿ. ವಿವಿಐಪಿ ಸಂಸ್ಕೃತಿಯನ್ನು ದೇಶ ವಿರೋಧಿಸುತ್ತದೆ. ಚುನಾವಣಾ ಆಯೋಗ, ಸೇನೆಗೆ ಯಶಸ್ವಿಯಾಗಿ ಚುನಾವಣೆ ನಡೆಸಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. 5 ವರ್ಷ ಮೂಲಭೂತವಾದ ಬಿಟ್ಟು ಕೆಲಸ ಮಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್, ಲೋಹಿಯಾ, ದೀನ್ ದಯಾಳ್, ಮಹಾತ್ಮಗಾಂಧಿ ಕನಸು ನನಸು ಮಾಡಲು ಕೆಲಸ ಮಾಡೋಣ ಎಂದು ಭಾಷಣ ಮುಗಿಸಿದರು.