ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ

Pinterest LinkedIn Tumblr


ನವದೆಹಲಿ: ಎನ್​ಡಿಎಗೆ ಸತತ ಎರಡನೇ ಬಾರಿಗೆ ಭರ್ಜರಿ ಜನಾದೇಶ ಬಂದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಸದಸ್ಯರು ರಾಜೀನಾಮೆ ಸಲ್ಲಿಸಿದರು. ಇವತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾದ ನರೇಂದ್ರ ಮೋದಿ ರಾಜೀನಾಮೆ ನೀಡಿದರು. ಹಾಗೆಯೇ 16ನೇ ಲೋಕಸಭೆಯನ್ನು ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದರು. ಪ್ರಧಾನಿ ಮೋದಿ ಮತ್ತು ತಂಡ ಸಲ್ಲಿಸಿದ ರಾಜೀನಾಮೆಗಳನ್ನು ಅಂಗೀಕರಿಸಿದ ರಾಷ್ಟ್ರಪತಿ ಕೋವಿಂದ್ ಅವರು, ಮುಂದಿನ ಸರಕಾರ ರಚನೆಯಾಗುವವರೆಗೂ ತಮ್ಮ ಕರ್ತವ್ಯ ಮುಂದುವರಿಸಿಕೊಂಡು ಹೋಗುವಂತೆ ಮನವಿ ಮಾಡಿದರು.

ಇದೇ ವೇಳೆ, ನರೇಂದ್ರ ಮೋದಿ ಮತ್ತು ಸಂಪುಟದ ಸದಸ್ಯರು ತಮ್ಮಲ್ಲಿ ರಾಜೀನಾಮೆ ಸಲ್ಲಿಸಿದ್ದನ್ನು ತಿಳಿಸಲು ರಾಷ್ಟ್ರಪತಿಗಳು ಮಾಡಿದ ಟ್ವೀಟ್​ಗೆ ನರೇಂದ್ರ ಮೋದಿ ಕಾವ್ಯಾತ್ಮಕವಾಗಿ ಟ್ವೀಟ್ ಮೂಲಕವೇ ಸ್ಪಂದಿಸಿದರು. “ಈ ಅವಧಿಯಲ್ಲಿ ಸೂರ್ಯ ಮುಳುಗಿದರೂ ನಮ್ಮ ಕಾಯಕದ ಹೊಳಪು ಕೋಟ್ಯಂತರ ಜನರ ಬದುಕಿಗೆ ಬೆಳಕಾಗುವುದು ಮುಂದುವರಿಯುತ್ತದೆ…” ಎಂದು ಬಣ್ಣಿಸಿದರು.

ರಾಜೀನಾಮೆ ನೀಡಲು ರಾಷ್ಟ್ರಪತಿಗಳ ಬಳಿ ತೆರಳುವ ಮುನ್ನ ಪ್ರಧಾನಿ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಸಭೆ ನಡೆಸಿ ಔಪಚಾರಿಕ ಮಾತುಕತೆ ನಡೆಸಿದರು. ಜನರ ಆಶೋತ್ತರ ಈಡೇರಿಸಲು ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸಿದ ಈ ತಂಡದೊಂದಿಗೆ ಕೆಲಸ ಮಾಡಿದ್ದು ಹೆಮ್ಮೆ ಎನಿಸುತ್ತದೆ ಎಂದು ನರೇಂದ್ರ ಮೋದಿ ಟ್ವೀಟ್ ಮೂಲಕ ತಮ್ಮ ಸಚಿವ ಸಹೋದ್ಯೋಗಿಗಳನ್ನ ಶ್ಲಾಘಿಸಿದರು.

ಸಂಪುಟ ಸಹೋದ್ಯೋಗಿಗಳಷ್ಟೇ ಅಲ್ಲ, ನರೇಂದ್ರ ಮೋದಿ ಅವರು ತಮ್ಮ ಪ್ರಧಾನಿ ಕಚೇರಿಯ ಸಿಬ್ಬಂದಿಯನ್ನೂ ಭೇಟಿಯಾಗಿ ಅವರ ಶ್ರಮಕ್ಕೆ ಧನ್ಯವಾದ ಹೇಳಿದರು.

ಇದೀಗ 16ನೇ ಲೋಕಸಭೆ ವಿಸರ್ಜನೆಯಾಗುವುದರೊಂದಿಗೆ ನೂತನ ಲೋಕಸಭೆ ರಚನೆ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ. ಇವತ್ತು ಎಲ್ಲಾ ಕ್ಷೇತ್ರಗಳ ಎಣಿಕೆ ಮುಕ್ತಾಯಗೊಂಡಿದ್ದು, ಚುನಾಯಿತಗೊಂಡ ಸಂಸದರ ಪಟ್ಟಿಯನ್ನು ಚುನಾವಣಾ ಆಯೋಗವು ರಾಷ್ಟ್ರಪತಿಗಳಿಗೆ ನೀಡುತ್ತದೆ. ಅದಾದ ಬಳಿಕ ರಾಷ್ಟ್ರಪತಿಗಳಿಂದ ಬಿಜೆಪಿಗೆ ಸರಕಾರ ರಚಿಸುವ ಆಹ್ವಾನ ಬರಲಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಕುತೂಹಲ ಇರುವುದು ಸಂಪುಟದ ರೂಪುರೇಖೆ ಹೇಗಿರುತ್ತದೆ ಎಂಬುದು. ಕರ್ನಾಟಕದಿಂದ ಉಮೇಶ್ ಜಾಧವ್ ಮತ್ತು ಬಿ.ವೈ. ರಾಘವೇಂದ್ರ ಅವರಿಗೆ ಸಚಿವ ಭಾಗ್ಯ ಸಿಗುವ ಸಾಧ್ಯತೆ ಇದೆ. ಸ್ಮೃತಿ ಇರಾನಿ ಅವರಿಗೆ ಒಳ್ಳೆಯ ಖಾತೆ ಸಿಗಬಹುದು. ಗೌತಮ್ ಗಂಭೀರ್ ಅವರನ್ನು ಕ್ರೀಡಾ ಸಚಿವರನ್ನಾಗಿ ಮಾಡಬಹುದು. ಹಣಕಾಸು ಸಚಿವರಾಗಿ ಜೇಟ್ಲಿಯವರೇ ಮುಂದುವರಿಯುತ್ತಾರಾ ಇಲ್ಲವಾ?. ಹಾಗೆಯೇ, ಅನಂತಕುಮಾರ್ ಹೆಗಡೆ, ಡಿ.ವಿ. ಸದಾನಂದಗೌಡ ಅವರಿಗೆ ಈ ಬಾರಿಯೂ ಸಂಪುಟ ಭಾಗ್ಯ ಇರುತ್ತಾ ಎಂಬ ಕುತೂಹಲಗಳಿವೆ.

Comments are closed.