ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಣೆಗೆ ಇನ್ನೇನು ಎರಡು ದಿನ ಬಾಕಿ ಉಳಿದಿದೆ. ಆಗಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿವೆ. ಇದೇ ಖುಷಿಯಲ್ಲಿ ತೇಲಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಇಂದು ಮಿತ್ರಕೂಟ ಎನ್ಡಿಎ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಕೇಂದ್ರ ಸಚಿವರು ಪಾಲ್ಗೊಂಡಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಔತಣಕೂಟದಲ್ಲಿ ಭಾಗಿಯಾಗಿದ್ದ ಎಲ್ಲಾ ಕೇಂದ್ರ ಸಚಿವರಿಗೂ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಕೇಂದ್ರದಲ್ಲಿ ಎನ್ಡಿಎ ಸರ್ಕಾರ 5 ವರ್ಷ ಸುಗಮವಾಗಿ ನಡೆಸಲು ಸಹಕರಿಸಿದ ಎಲ್ಲಾ ಮಿತ್ರಪಕ್ಷಗಳಿಗೂ ಆಭಾರಿಯಾಗಿದ್ದೇನೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸಲಿದೆ. ಮತ್ತೊಮ್ಮೆ ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆಗಲಿದ್ದಾರೆ. ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಕಾರಣಕ್ಕೆ ಬಿಜೆಪಿಗೆ ಹಿನ್ನಡೆಯಾದರೂ, ಪಶ್ಚಿಮ ಬಂಗಾಳದಲ್ಲಿ ಈ ಸೀಟುಗಳನ್ನು ಸರಿದೂಗಿಸಬಹುದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹಾಗಾಗಿಯೇ ಅಮಿತ್ ಶಾ ಈ ಔತಣಕೂಟ ಆಯೋಜಿಸಿದ್ದರು ಎನ್ನಲಾಗುತ್ತಿದೆ.
ಇತ್ತೀಚೆಗೆ ಬಿಡುಗಡೆಯಾದ ಹಲವು ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಎನ್ಡಿಎ ಮೈತ್ರಿಕೂಟ 300ಕ್ಕೂ ಅಧಿಕ ಸ್ಥಾನ ಪಡೆಯಲಿದೆ. ನ್ಯೂಸ್ 24-ಚಾಣಕ್ಯ ಸಮೀಕ್ಷೆ ಪ್ರಕಾರ ಎನ್ ಡಿಎ 350 ಸ್ಥಾನ ಗಳಿಸಲಿದೆ. ಆಜ್ ತಕ್/ಇಂಡಿಯಾ ಟುಡೇ-ಆಯಕ್ಸಿಸ್ 339ರಿಂದ 365, ನ್ಯೂಸ್ 18-ಐಪಿಎಸ್ ಒಎಸ್ 336, ಟೈಮ್ಸ್ ನೌ-ವಿಎಂಆರ್ 306, ರಿಪಬ್ಲಿಕ್- ಜನ್ ಕೀ ಬಾತ್ 315 ಹಾಗೂ ಇಂಡಿಯಾ ಟಿವಿ-ಸಿಎನ್ ಎಕ್ಸ್ 315 ಸ್ಥಾನ ಗಳಿಸುವುದಾಗಿ ಸಮೀಕ್ಷೆಯಲ್ಲಿ ತಿಳಿಸಿವೆ.
ಇನ್ನು ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ 5 ರಿಂದ 7 ಸೀಟು, ಕೇಸರಿ ಪಕ್ಷಕ್ಕೆ 21 ರಿಂದ 33 ಸೀಟು ಲಭ್ಯವಾಗಲಿದೆ ಎನ್ನುತ್ತಿವೆ ಸಮೀಕ್ಷೆಗಳು.
ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಏನೇ ಆಗಲಿ ನಾವು ಕೇಂದ್ರ ಚುನಾವಣೆ ಆಯೋಗ ನೀಡಬೇಕಿರುವ ತೀರ್ಪಿಗೆ ಕಾಯಬೇಕಿದೆ.
Comments are closed.