ರಾಷ್ಟ್ರೀಯ

ಅಯೋಧ್ಯೆಯ ಸೀತಾರಾಮ ಮಂದಿರದಲ್ಲಿ ಇಫ್ತಾರ್ ಕೂಟ; ನಮಾಝಿಗೂ ಅವಕಾಶ: ಸೌಹಾರ್ದತೆಗೆ ಹೊಸ ಭಾಷ್ಯ ಬರೆದ ಜನ

Pinterest LinkedIn Tumblr

ಲಖನೌ: ಅಯೋಧ್ಯೆ ಎಂದರೆ ಸದಾ ಧಾರ್ಮಿಕ ವೈಷಮ್ಯವೇ ನೆನಪಾಗಬಹುದು. ಆದರೆ ಅಲ್ಲಿಯ ಜನರ ಕೋಮು ಸೌಹಾರ್ದತೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಮತ್ತೀಗ ರಂಜಾನ್ ಮಾಸ ನಡೆಯುತ್ತಿದ್ದು, ಅಯೋಧ್ಯೆಯ ಜನರು ಸೌಹಾರ್ದತೆಗೆ ಹೊಸ ಭಾಷ್ಯ ಕಲ್ಪಿಸಿದ್ದಾರೆ.

ರಾಮಲಲ್ಲಾನ ಜನ್ಮಸ್ಥಳದಲ್ಲಿರುವ ಸೀತಾರಾಮ ಮಂದಿರದಲ್ಲಿ ರಂಜಾನ್ ತಿಂಗಳಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗುತ್ತದೆ. ಅಷ್ಟೇ ಅಲ್ಲ ನಮಾಜ್ ಕೂಡ ಮಾಡಲಾಗುತ್ತದೆ. ಧರ್ಮಗಳ ಭೇದವಿಲ್ಲದೆ ಎಲ್ಲ ಸಮುದಾಯಗಳ ಜನರು ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇದು ಮೂಲಭೂತವಾದ, ಕೋಮುವಾದ ಮೆರೆಯುವ ತುಚ್ಛ ಮನಸ್ಸುಗಳಿಗೆ ಪಾಠ ಕಲಿಯುವಂತಿದೆ.

ನಾವು ಇಫ್ತಾರ ಕೂಟವನ್ನು ಆಯೋಜಿಸುತ್ತಿರುವುದು ಇದು ಮೂರನೆಯ ಬಾರಿ. ಭವಿಷ್ಯದಲ್ಲೂ ಇದನ್ನು ಮುಂದುವರಿಸುತ್ತೇವೆ. ಎಲ್ಲ ಹಬ್ಬಗಳನ್ನು ನಾವು ಖುಷಿಯಿಂದ ಆಚರಿಸಬೇಕು. ನಮ್ಮಲ್ಲಿ ರಂಜಾನ್ ಸಮಯದಲ್ಲಿ ಹಿಂದೂಗಳು ಮುಸ್ಲಿಂ ಬಾಂಧವರಿಗಾಗಿ ವಿಶೇಷ ಕೂಟವನ್ನು ಆಯೋಜಿಸುತ್ತಾರೆ. ಮುಸ್ಲಿಮರೇನೂ ಇದಕ್ಕೆ ಹೊರತಲ್ಲ. ನವರಾತ್ರಿ ಸಮಯದಲ್ಲಿ ಅವರು ಕೂಡ ಶ್ರದ್ಧಾಭಕ್ತಿಯಿಂದ ವ್ರತದಲ್ಲಿ ತೊಡಗುತ್ತಾರೆ ಎನ್ನುತ್ತಾರೆ ಮಂದಿರದ ಪೂಜಾರಿ ಯುಗಲ್ ಕಿಶೋರ್.

ನಾವೆಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕುತ್ತಿದ್ದೇವೆ. ಪರಷ್ಪರರ ಹಬ್ಬಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತೇವೆ. ದೇಶದಲ್ಲಿ ಕೋಮುದ್ವೇಷ ಬೆಳೆಸುತ್ತಿರುವ ಜನರ ಮಧ್ಯೆ ಸೀತಾರಾಮ ದೇಗುಲದ ಪೂಜಾರಿ ಪ್ರತ್ಯೇಕವಾಗಿ ನಿಲ್ಲುತ್ತಾರೆ ಎಂದು ಕೂಟದಲ್ಲಿ ಪಾಲ್ಗೊಂಡಿದ್ದ ಹಿರಿಯರೊಬ್ಬರು ಖುಷಿಯಿಂದ ಹೇಳಿಕೊಳ್ಳುತ್ತಾರೆ.

Comments are closed.