ತಿರವನಂತಪುರಂ: ಸಾಮಾನ್ಯವಾಗಿ ಮಗ ಪ್ರೀತಿಸಿ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದರೆ ಪೋಷಕರು ವಿರೋಧಿಸುತ್ತಾರೆ. ಆದರೆ ಕೇರಳದ ಕೊಟ್ಟಯಂನಲ್ಲಿ ತಂದೆಯೊಬ್ಬರು ತಮ್ಮ ಮಗ ಪ್ರೀತಿಸಿ ಮೋಸ ಮಾಡಿದ್ದ ಯುವತಿಯನ್ನು ಮಗಳಂತೆ ಸಾಕಿದ್ದು, ಬೇರೆ ಹುಡುಗನೊಂದಿಗೆ ಮದುವೆ ಮಾಡಿಸಿರುವ ಅಪರೂಪದ ಘಟನೆ ನಡೆದಿದೆ.
ಇಂತಹ ಅಪರೂಪದ ಘಟನೆಯ ಬಗ್ಗೆ ಸಂಧ್ಯಾ ಪಲ್ಲವಿ ಅವರು ಫೇಸ್‍ಬುಕ್‍ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಇದೀಗ ಆ ಫೋಸ್ಟ್ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆದ ನಂತರ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಪೋಸ್ಟ್ ನಲ್ಲಿ ಏನಿತ್ತು?
ಇಂದು ನಾನು ಸ್ನೇಹಿತರೊಬ್ಬರ ಒಂದು ವಿಶೇಷ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಈ ಮದುವೆ ಕೊಟ್ಟಯಂ ಜಿಲ್ಲೆಯ ತಿರುನಕ್ಕರ ಗ್ರಾಮದಲ್ಲಿ ನಡೆದಿದೆ. ಆದರೆ ಮಾಂಗಲ್ಯಧಾರಣೆ ವೇಳೆ ಕಣ್ಣೀರು ಬಂದಿತ್ತು ಎಂದು ಮೊದಲಿಗೆ ಹೇಳಿಕೊಂಡಿದ್ದಾರೆ.
ತಿರುನಕ್ಕರ ನಿವಾಸಿ ಶಾಜಿ ಮತ್ತು ಅವರ ಪತ್ನಿ ಅತಿಥಿಗಳನ್ನು ಬರಮಾಡಿಕೊಳ್ಳುವ ಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಆರು ವರ್ಷಗಳ ಹಿಂದೆ ಶಾಜಿ ಅವರ ಮಗ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಈ ವೇಳೆ ತನ್ನ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ನಂತರ ಇಬ್ಬರು ಮನೆಬಿಟ್ಟು ಓಡಿಹೋಗಿದ್ದರು. ಇತ್ತ ಮಗಳ ಕಾಣೆಯಾಗಿದ್ದಳು ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಅವರಿಬ್ಬರನ್ನು ಪತ್ತೆಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಈ ವೇಳೆ ಹುಡುಗನ ಜೊತೆ ಓಡಿ ಹೋದ ಮಗಳು ನಮಗೆ ಬೇಡ ಎಂದು ಹುಡುಗಿಯನ್ನು ಆಕೆಯ ಪೋಷಕರು ಬಿಟ್ಟು ಹೋದರು. ಕೊನೆಗೆ ಮಕ್ಕಳಿಗೆ 18 ವರ್ಷ ತುಂಬಿದ ಮೇಲೆ ಮದುವೆ ಮಾಡುತ್ತೇವೆ ಎಂದು ಹುಡುಗನ ಪೋಷಕರು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.
ತಂದೆ ಶಾಜಿ ಮಗನನ್ನು ಹಾಸ್ಟೆಲಿಗೆ ಸೇರಿಸಿ ವಿದ್ಯಾಭ್ಯಾಸವನ್ನು ಮುಂದುರಿಸಿದ್ದರು. ಇತ್ತ ಮಗ ಕರೆದುಕೊಂಡು ಬಂದ ಹುಡುಗಿಯನ್ನು ಮನೆಯಲ್ಲಿರಿಸಿ ಓದು ಮುಂದುವರಿಯುವಂತೆ ನೋಡಿಕೊಂಡಿದ್ದರು. ಈ ಮಧ್ಯೆ ಮಗ ಬೇರೊಂದು ಹುಡುಗಿಯನ್ನು ಪ್ರೀತಿ ಮಾಡಿದ್ದಾನೆ. ಅಷ್ಟೇ ಅಲ್ಲದೇ ಕಳೆದ ವರ್ಷ ಮಗ ಊರಿಗೆ ಮರಳಿ ಬರುವಾಗ ಬೇರೊಂದು ಹುಡುಗಿಯನ್ನು ಮದುವೆಯಾಗಿ ಬಂದಿದ್ದಾನೆ.
ಪ್ರೀತಿಸಿದ್ದ ಹುಡುಗಿಗೆ ಮೋಸ ಮಾಡಿದ್ದಕ್ಕಾಗಿ ಮಗನನ್ನು ತಮ್ಮ ಕುಟುಂಬದಿಂದ ಹೊರಹೋಗುವಂತೆ ಹೇಳಿದ್ದಾರೆ. ಇತ್ತ ಆತನಿಗಾಗಿ ಕಾಯುತ್ತಿದ್ದ ಯುವತಿಗೆ ತನ್ನ ಮಗನಿಗೆ ಸೇರಬೇಕಿದ್ದ ಆಸ್ತಿಯನ್ನು ಆಕೆಯ ಹೆಸರಿಗೆ ಬರೆದಿದ್ದಾರೆ. ಅಷ್ಟೇ ಅಲ್ಲದೇ ಕರುನಾಗಪಳ್ಳಿ ನಿವಾಸಿ ಅಜಿತ್ ಜೊತೆ ಆ ಹುಡುಗಿಯ ಮದುವೆ ಮಾಡಿಸಿದ್ದಾರೆ. ತಂದೆ-ತಾಯಿ ಸ್ಥಾನದಲ್ಲಿ ನಿಂತು ಮಗಳಂತೆ ಸಾಕಿದ್ದ ಯುವತಿಯನ್ನು ತಿರುನಕ್ಕರ ದೇವಾಲಯದಲ್ಲಿ ಕನ್ಯಾದಾನ ಮಾಡಿಕೊಟ್ಟಿದ್ದಾರೆ.
ಈ ದಂಪತಿಗೆ ಇನ್ನೊಬ್ಬ 8 ವರ್ಷದ ಮಗನಿದ್ದಾನೆ ಎಂದು ವಿಶೇಷ ಮದುವೆಯ ಸಂಪೂರ್ಣ ವಿವರವನ್ನು ಬರೆದಿದ್ದಾರೆ.