ಬೆಂಗಳೂರು: ಸೂಪರ್ ಸ್ಟಾರ್ ರಜಿನೀಕಾಂತ್ ಅವರ ಪತ್ನಿ ಲತಾ ರಜಿನೀಕಾಂತ್ ವಿರುದ್ಧದ ವಂಚನೆ ಪ್ರಕರಣ ನಾಲ್ಕು ವರ್ಷವಾದರೂ ಮುಕ್ತಿ ಕಾಣದೇ ಕೂತಿದೆ. ಬೆಂಗಳೂರು ಪೊಲೀಸರು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಟೀಕೆಗೆ ಒಳಗಾಗಿದ್ದಾರೆ. ಹಲಸೂರು ಗೇಟ್ ಠಾಣೆ ಪೊಲೀಸರು ಲತಾ ರಜಿನಿಕಾಂತ್ ಅವರನ್ನು ವಿಚಾರಣೆಗೊಳಪಡಿಸಲು ನಡೆಸುತ್ತಿರುವ ಪ್ರಯತ್ನಗಳು ವಿಫಲವಾಗುತ್ತಲೇ ಇವೆ. ವಿಚಾರಣೆಗೆ ಹಾಜರಾಗುವಂತೆ ಹಿಂದೆ ನೀಡಿದ್ದ ನೋಟೀಸ್ಗಳಿಗೆ ಸೂಪರ್ ಸ್ಟಾರ್ ಪತ್ನಿ ನಿರ್ಲಕ್ಷ್ಯ ತೋರಿದ್ದಾರೆ. ಈ ತಿಂಗಳ 20ನೇ ತಾರೀಖು ವಿಚಾರಣೆಗೆ ಬರುವಂತೆ ಮತ್ತೊಂದು ನೋಟೀಸ್ ನೀಡಲಾಗಿತ್ತು. ಇದನ್ನೂ ಲತಾ ರಜನಿಕಾಂತ್ ಗಂಭೀರವಾಗಿ ಪರಿಗಣಿಸಲಿಲ್ಲ. ತಾನು ಪ್ರವಾಸದಲ್ಲಿದ್ದೀನಿ. ಮೇ 20ರಂದು ಬರಲು ಕಷ್ಟ. ಆ ನಂತರ ಬರುವುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸುಪ್ರೀಂಕೋರ್ಟ್ನಿಂದ ಒತ್ತಡಕ್ಕೆ ಬಿದ್ದಿರುವ ಪೊಲೀಸರು ಈ ಬಾರಿ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ಒಂದು ವೇಳೆ ಮೇ 20ಕ್ಕೆ ಲತಾ ಅವರು ವಿಚಾರಣೆಗೆ ಹಾಜರಾಗದಿದ್ದರೆ ಪೊಲೀಸರು ಅರೆಸ್ಟ್ ಮಾಡಲು ಮುಂದಾಗಬಹುದೆನ್ನಲಾಗಿದೆ.
ಲತಾ ರಜಿನೀಕಾಂತ್ ವಿರುದ್ಧದ ಪ್ರಕರಣವೇನು?
2014ರಲ್ಲಿ ಸೂಪರ್ ಫ್ಲಾಪ್ ಆದ “ಕೋಚಡಯ್ಯಾನ್” ಸಿನಿಮಾ ಸಂಬಂಧಿತ ಪ್ರಕರಣ ಇದು. ರಜಿನಿಕಾಂತ್ ಪುತ್ರ ಸೌಂದರ್ಯ ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಬೆಂಗಳೂರಿನ ಖಾಸಗಿ ಜಾಹೀರಾತು ಸಂಸ್ಥೆಯೊಂದರ ಸೇವೆ ಬಳಸಿಕೊಳ್ಳಲಾಯಿತು. ಇದರ ಮೊತ್ತ 10 ಕೋಟಿ ರೂ ಆಗಿತ್ತು. ಇದರಲ್ಲಿ 6.2 ಕೋಟಿ ರೂ ಬರುವುದು ಬಾಕಿ ಇದೆ ಎಂದು ಜಾಹೀರಾತು ಸಂಸ್ಥೆಯು ಆರೋಪ ಮಾಡಿದೆ.
ಲತಾ ರಜನಿಕಾಂತ್ ಅವರ ವೈಯಕ್ತಿಕ ಆಶ್ವಾಸನೆಗಳನ್ನು ನಂಬಿಕೊಂಡು ತಾವು ದುಡ್ಡು ಹಾಕಿದ್ದೆವು ಎಂದು ಹೇಳಿದ ಈ ಸಂಸ್ಥೆಯ ಮಾಲೀಕ ಅಭಿಚಂದ್ ನೆಹರ್ ದೂರು ದಾಖಲಿಸಿದ್ದರು. ಈ ಸಂಸ್ಥೆಯ ದೂರನ್ನು ಹೈಕೋರ್ಟ್ ವಜಾಗೊಳಿಸಿತಾದರೂ ಸುಪ್ರೀಂ ಕೋರ್ಟ್ ಮರುಜೀವ ನೀಡಿದೆ.
ಹಾಗೆಯೇ, ವಿತರಕರಿಗೆ ಆದ ನಷ್ಟದ ಕುರಿತು 2015ರಲ್ಲಿ ಕೋರ್ಟ್ಗೆ ಅಫಿಡವಿಟ್ ಸಲ್ಲಿಸುವ ವೇಳೆ ಲತಾ ಅವರು ನಕಲಿ ದಾಖಲೆ ನೀಡಿ ಕೋರ್ಟ್ ತೀರ್ಪು ತಮ್ಮ ಬರುವಂತೆ ಮಾಡಿದ್ದಾರೆ ಎಂಬ ಆರೋಪವೂ ಇದೆ. ಕೋಚಾಡಿಯನ್ ಚಿತ್ರದ ಹಕ್ಕುಗಳನ್ನು ನಕಲಿ ಲೆಟರ್ ಹೆಡ್ ಮೂಲಕ ಎರಡು ಬಾರಿ ಮಾರಾಟ ಮಾಡಲಾಯಿತೆಂಬ ಆಪಾದನೆ ಇದೆ. ಇದೇ ನಕಲಿ ದಾಖಲೆ ದಾಖಲೆ ಸಲ್ಲಿಕೆ ಸಂಬಂಧ ಬೆಂಗಳೂರಿನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪ್ರಕರಣ ದಾಖಲಿಸಿ ಎಫ್ಐಆರ್ ಹಾಕುವಂತೆ ಹಲಸೂರು ಗೇಟ್ ಪೊಲೀಸರಿಗೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮೇ 20ರಂದು ವಿಚಾರಣೆಗೆ ಹಾಜರಾಗುವಂತೆ ಲತಾ ರಜಿನೀಕಾಂತ್ ಅವರಿಗೆ ನೋಟೀಸ್ ಜಾರಿ ಮಾಡಿದ್ದರು.