ಕರ್ನಾಟಕ

ಮಾಜಿ-ಹಾಲಿ ಮುಖ್ಯಮಂತ್ರಿಗಳ ಟ್ವೀಟ್​ ವಾರ್ ಗೆ ಅಂತ್ಯ ಕಲ್ಪಿಸಿದ ಕುಮಾರಸ್ವಾಮಿ!

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ ಹೇಳಿಕೆಗೆ ರಾಜಕೀಯ ಬಣ್ಣಕಟ್ಟಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ ಎಂದು ಸಿಎಂ ಕುಮಾರಸ್ವಾಮಿ ವಿಷಾಧ ವ್ಯಕ್ತಪಡಿಸಿದ್ದಾರೆ.

ಬುಧವಾರ ಹುಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಸ್ತುತ ಭುಗಿಲೆದ್ದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಕೂಗಿನ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದ ಸಿಎಂ ಕುಮಾರಸ್ವಾಮಿ, “ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪಿಸಿ, ಖರ್ಗೆಗೆ ಇರುವ ಸಾಮರ್ಥ್ಯಕ್ಕೆ ಅವರು ಎಂದೋ ಮುಖ್ಯಮಂತ್ರಿಯಾಗಬೇಕಿತ್ತು” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈ ಹೇಳಿಕೆ ಮೂಲಕ ಸಿಎಂ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ಧಾರೆ ಎಂದೇ ಅನುಮಾನಿಸಲಾಗಿತ್ತು.

ಕುಮಾರಸ್ವಾಮಿಯವರ ಈ ಹೇಳಿಕೆಗೆ ಟ್ವೀಟ್​ ಮೂಲಕ ಅಷ್ಟೇ ನಾಜೂಕಾಗಿ ಪ್ರತಿಕ್ರಿಯೆ ನೀಡದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನ ಇದ್ದಾರೆ. ಅವರಲ್ಲಿ ಹೆಚ್​.ಡಿ ರೇವಣ್ಣ ಕೂಡ ಒಬ್ಬರು. ಎಲ್ಲಕ್ಕೂ ಕಾಲ ಕೂಡಿಬರಬೇಕು,” ಎಂದು ಹೇಳುವ ಮೂಲಕ ಕುಮಾರಸ್ವಾಮಿ ವಿರುದ್ಧ ಸಹೋದರ ರೇವಣ್ಣನವರನ್ನೇ ಎತ್ತಿಕಟ್ಟಲು ಮುಂದಾಗಿದ್ದರು.

ಈ ಟ್ವೀಟ್​ ಯುದ್ಧ ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ಕೂತೂಹಲ ಮೂಡಿಸಿತ್ತು. ಅಲ್ಲದೆ ಇನ್ನೂ ಮುಂದುವರೆಯುವ ಲಕ್ಷಣಗಳು ಗೋಚರಿಸಿತ್ತು. ಆದರೆ, ಈ ವಿವಾದಕ್ಕೆ ತಾರ್ಕಿಕ ಅಂತ್ಯ ಕಲ್ಪಿಸಲು ಮುಂದಾಗಿರುವ ಕುಮಾರಸ್ವಾಮಿ ಗುರುವಾರ ಮಧ್ಯಾಹ್ನದ ವೇಳೆಗೆ ಮತ್ತೊಂದು ಟ್ವೀಟ್ ಮಾಡುವ ಮೂಲಕ ಎಲ್ಲಾ ವಿವಾದವನ್ನು ಶಮನ ಮಾಡಲು ಮುಂದಾಗಿದ್ದಾರೆ.

ಈ ಟ್ವೀಟ್​ನಲ್ಲಿ, “ನಾಡಿನ ಹಿರಿಯ ರಾಜಕಾರಣಿ ಹಾಗೂ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ ಹೇಳಿಕೆ ಕರ್ನಾಟಕದ ಹಲವು ದಶಕಗಳ ರಾಜಕೀಯ ವಾಸ್ತವತೆಯನ್ನು ಆಧರಿಸಿದ ಮನದಾಳದ ಮಾತು. ಈ ಹೇಳಿಕೆಗೆ ರಾಜಕೀಯದ ಬಣ್ಣ ಕಟ್ಟಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ.

ಈ ಹೇಳಿಕೆಯ ಮೂಲಕ ರಾಜಕೀಯ ಲಾಭ ಪಡೆಯುವ ಕೀಳು ಅಭಿರುಚಿ ನನ್ನದಲ್ಲ. ಖರ್ಗೆಯವರದು ಪಕ್ಷ, ಜಾತಿ ಎಲ್ಲವನ್ನೂ ಮೀರಿದ ಮಹೋನ್ನತ ವ್ಯಕ್ತಿತ್ವ ಎನ್ನುವುದನ್ನು ನಾವು ಮರೆಯಬಾರದು” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಎಲ್ಲಾ ವಿವಾದಕ್ಕೂ ತೆರೆ ಎಳೆದಿದ್ದಾರೆ.

ಅಭಿಮಾನದಿಂದ ಸಿದ್ದು ಹಾಗೆ ಹೇಳಿದ್ದಾರೆ; ರೇವಣ್ಣ : ಬೆಳಗ್ಗೆಯೇ ಟ್ವೀಟ್ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ “ಸಚಿವ ಹೆಚ್​.ಡಿ. ರೇವಣ್ಣ ಅವರಿಗೂ ಸಿಎಂ ಆಗುವ ಅರ್ಹತೆ ಇದೆ” ಎಂದು ಬರೆದುಕೊಂಡಿದ್ದರು. ಸಿದ್ದು ಅವರ ಈ ಹೇಳಿಕೆ ವಿರುದ್ಧ ಇದು ಇದು ಅಣ್ಣ-ತಮ್ಮಂದಿರ ನಡುವೆ ತಂದಿಡುವ ಕೆಲಸ ಎಂದೇ ಎಲ್ಲರೂ ಟೀಕಿಸಿದ್ದರು.

ಆದರೆ, ಈ ವಿವಾದದ ಕುರಿತು ಹಾಸನದ ನರಸೀಪುರದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ರೇವಣ್ಣ, “ಸಿದ್ದರಾಮಯ್ಯನವರಿಗೆ ನನ್ನ ಮೇಲೆ ಅಭಿಮಾನವಿದೆ. ಇದೇ ಕಾರಣಕ್ಕೆ ಅವರು ನಾನು ಸಿಎಂ ಸ್ಥಾನಕ್ಕೆ ಅರ್ಹ ಎಂಬಂತಹ ಹೇಳಿಕೆ ನೀಡಿರುವ ಸಾಧ್ಯತೆ ಇದೆ. ಆದರೆ, ವ್ಯಯಕ್ತಿಕವಾಗಿ ನನ್ನ ಹಾಗೂ ಕುಮಾರಸ್ವಾಮಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈಗಾಗಲೇ ಕುಮಾರಸ್ವಾಮಿ ಸಿಎಂ ಆಗಿರುವುದರಿಂದ ನನ್ನ ಹೆಸರು ತಳುಕು ಹಾಕುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Comments are closed.