ರಾಷ್ಟ್ರೀಯ

ದೇಶದಲ್ಲಿ ತೈಲ ಬಿಕ್ಕಟ್ಟು?; ಇರಾನ್​ನಿಂದ ಪೆಟ್ರೋಲಿಯಂ ಆಮದು ಕುರಿತು ಮುಂದಿನ ಸರ್ಕಾರ ತೀರ್ಮಾನ -ಸಚಿವೆ ಸುಷ್ಮಾ

Pinterest LinkedIn Tumblr


ನವದೆಹಲಿ: ಇರಾನ್​ ನಿಂದ ತೈಲ ಆಮದು ಮಾಡಿಕೊಳ್ಳುವ ಕುರಿತು ಮುಂದಿನ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಇರಾನ್​ ವಿದೇಶಾಂಗ ಸಚಿವ ಮೊಹಮ್ಮದ್ ಜಾವೆದ್ ಶರೀಫ್ ತೈಲ ರಫ್ತು ಕುರಿತಾಗಿ ಕಳೆದ ಒಂದು ವಾರದಿಂದ ಚೀನಾ, ತುರ್ಕ್​ಮೇನಿಸ್ತಾನ್, ಇರಾಕ್ ಸೇರಿದಂತೆ ಹಲವಾರು ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಮಂಗಳವಾರ ಅವರು ಪ್ರವಾಸದ ಭಾಗವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಅಲ್ಲದೆ ಎರಡೂ ರಾಷ್ಟ್ರಗಲ ನಡುವಿನ ತೈಲ ಸಂಬಂಧದ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜೊತೆಗೆ ಪರಸ್ಪರ ಮಹತ್ವದ ಮಾತುಕತೆ ನಡೆಸಿದ್ದಾರೆ.

ದೆಹಲಿಯಲ್ಲಿ ಇರಾನ್​ ವಿದೇಶಾಂಗ ಸಚಿವ ಮೊಹಮ್ಮದ್ ಜಾವೆದ್ ಶರೀಫ್ ಅವರ ಜೊತೆಗಿನ ಚರ್ಚೆಯ ನಂತರ ಮಾತನಾಡಿರುವ ಸಚಿವೆ ಸುಷ್ಮಾ ಸ್ವರಾಜ್, “ಇರಾನ್​ನಿಂದ ತೈಲ ಆಮದಿನ ಕುರಿತು ಚುನಾವಣೆಯ ನಂತರ ವಾಣಿಜ್ಯ ಪರಿಗಣನೆ, ಶಕ್ತಿ ಭದ್ರತೆ ಹಾಗೂ ಆರ್ಥಿಕ ಆಸಕ್ತಿಗಳನ್ನು ಪರಿಗಣಿಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು. ಮುಂದಿನ ಸರ್ಕಾರ ಈ ಕುರಿತು ತೀರ್ಮಾನಿಸಲಿದೆ” ಎಂದು ತಿಳಿಸಿದ್ದಾರೆ.

ಇರಾನ್​ನಿಂದ ತೈಲ ಖರೀದಿಗೆ ಅಮೇರಿಕ ತಡೆ : ಕಳೆದ ಕೆಲ ವರ್ಷಗಳಿಂದಲೇ ಅಮೇರಿಕ ಹಾಗೂ ಇರಾನ್​ ನಡುವೆ ರಾಜತಾಂತ್ರಿಕವಾಗಿ ದೊಡ್ಡ ಬಿಕ್ಕಟ್ಟೊಂದು ಸೃಷ್ಟಿಯಾಗಿದೆ. ಇರಾನ್ ದೇಶ ಸೈಬರ್ ದಾಳಿ ನಡೆಸುತ್ತಿದೆ, ಖಂಡಾತರ ಕ್ಷಿಪಣಿ ಪರೀಕ್ಷೆ, ಮಧ್ಯಪ್ರಾಚ್ಯದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ಇತ್ಯಾದಿ ವಿದ್ರೋಹಿ ಚಟುವಟಿಕೆಯಲ್ಲಿ ತೊಡಗಿದೆ ಎಂಬುದು ಇರಾನ್ ದೇಶದ ವಿರುದ್ಧ ಅಮೇರಿಕ ಆರೋಪ.

ಇದೇ ಕಾರಣಕ್ಕೆ ಅಮೇರಿಕ 2015ರಲ್ಲಿ ಇರಾನ್ ಪರಮಾಣು ಕಾರ್ಯಕ್ರಮಗಳಿಗೆ ಸಂಬಧಿಸಿದ ಬಹು ರಾಷ್ಟ್ರೀಯ ಒಪ್ಪಂದದಿಂದ ಹೊರ ನಡೆದಿತ್ತು. ಅಲ್ಲದೆ ಭಾರತ, ಚೀನಾ, ಇರಾಕ್, ಇಟಲಿ, ದಕ್ಷಿಣ ಕೊರಿಯಾ ದೇಶಗಳಿಂದ ಕ್ರಮೇಣ ತೈಲ ಆಮದು ನಿಲ್ಲಿಸಿ ಇರಾನ್ ಆರ್ಥಿಕತೆ ಪೆಟ್ಟು ನೀಡಬೇಕು ಎಂಬುದು ಅಮೇರಿಕ ಉದ್ದೇಶ. ಇದೇ ಕಾರಣ ಇರಾನ್​ನಿಂದ 90 ದಿನಗಳ ಒಳಗಾಗಿ ತೈಲ ಆಮದು ನಿಲ್ಲಿಸಬೇಕು ಎಂದು ಭಾರತದ ಮೇಲೆ ಅಮೇರಿಕ ಒತ್ತಡ ಹೇರಿತ್ತು.

ಮೇ.1ಕ್ಕೆ ಅಮೇರಿಕ ನೀಡಿದ ಕಾಲವಕಾಶ ಮುಗಿದಿದೆ. ಹೀಗಾಗಿ ಇನ್ನೂ ತೈಲ ಆಮದು ನಿಲ್ಲಿಸದಿದ್ದರೆ ಭಾರತ ಅಮೇರಿಕದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಅಲ್ಲದೆ ಚೀನಾ ನಂತರ ಭಾರತ ಅತಿಹೆಚ್ಚು ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರ. ಮಾಸಿಕ 12.5 ಲಕ್ಷ ಟನ್ ಅಂದರೆ ವಾರ್ಷಿಕ 1.5 ಕೋಟಿ ಟನ್​ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇರಾನ್ ಭಾರತಕ್ಕೆ ಅತಿಹೆಚ್ಚು ತೈಲ ಪೂರೈಕೆ ಮಾಡುವ ರಾಷ್ಟ್ರ. ಹೀಗಾಗಿ ಇರಾನ್​ನಿಂದ ತೈಲ ಆಮದು ನಿಲ್ಲಿಸಿದರೆ ಭಾರತದ ತೈಲ ಪೂರೈಕೆ ಮೇಲೆ ವ್ಯತಿರೀಕ್ತ ಪರಿಣಾಮವಾಗುತ್ತದೆ. ಹೀಗಾಗಿ ಇರಾನ್ ವಿದೇಶಾಂಗ ಸಚಿವರ ಭಾರತ ಭೇಟಿ ಮಹತ್ವ ಪಡೆದುಕೊಂಡಿದೆ.

Comments are closed.