ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಪ್ರಚಾರಕ್ಕೆ ನಿಷೇಧ; ಇತಿಹಾಸದಲ್ಲಿ ಇಂತಹ ಘಟನೆ ಪ್ರಥಮ

Pinterest LinkedIn Tumblr


ನವದೆಹಲಿ: ಕೊನೆಯದೊಂದು ಹಂತದ ಮತದಾನ ಬಾಕಿ ಇರುವಂತೆಯೇ ಚುನಾವಣಾ ಆಯೋಗ ಇವತ್ತು ಅಚ್ಚರಿಯ ನಿರ್ಧಾರ ಪ್ರಕಟಿಸಿದೆ. ಪಶ್ಚಿಮ ಬಂಗಾಳದಲ್ಲಿ ಅವಧಿಗೆ ಒಂದು ಮೊದಲೇ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲು ನಿರ್ಧರಿಸಿದೆ. ನಾಳೆ, ಅಂದರೆ ಮೇ 16 ರಾತ್ರಿ 10 ಗಂಟೆಯವರೆಗೆ ಮಾತ್ರ ಬಹಿರಂಗ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ. ಆ ನಂತರ ಪಶ್ಚಿಮ ಬಂಗಾಳದ 9 ಕ್ಷೇತ್ರಗಳಲ್ಲಿ ಯಾವುದೇ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಸಂವಿಧಾನದ 324ನೇ ವಿಧಿಯ ಅಧಿಕಾರ ಉಪಯೋಗಿಸಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ. ಭಾರತದ ಚುನಾವಣೆ ಇತಿಹಾಸದಲ್ಲಿ ಸಂವಿಧಾನದ ಈ ವಿಶೇಷಾಧಿಕಾರ ಉಪಯೋಗಿಸಿ ಆಯೋಗವು ಬಹಿರಂಗ ಪ್ರಚಾರಕ್ಕೆ ನಿಷೇಧ ಹೇರಿದ್ದು ಇದೇ ಮೊದಲಾಗಿದೆ.

ಮೇ 19ರಂದು ಏಳನೇ ಹಾಗೂ ಕೊನೆಯ ಹಂತದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 9 ಕ್ಷೇತ್ರಗಳು ಸೇರಿದಂತೆ ದೇಶಾದ್ಯಂತ ಒಟ್ಟು 59 ಕ್ಷೇತ್ರಗಳಲ್ಲಿ ಮತದಾನವಾಗುತ್ತಿದೆ. ಮತದಾನಕ್ಕೆ ಎರಡು ದಿನ ಇರುವವರೆಗೂ ಬಹಿರಂಗ ಪ್ರಚಾರಕ್ಕೆ ಅವಕಾಶ ಇರುತ್ತದೆ. ಅಂದರೆ ಮೇ 17ರವರೆಗೂ ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷಗಳು ಸಾರ್ವಜನಿಕ ಸಭೆ ಮತ್ತು ಪ್ರಚಾರ ನಡೆಸಬಹುದು. ಆದರೆ, ಬಂಗಾಳದ ದಂದಂ, ಬಾರಾಸತ್, ಬಾಸಿರ್​ಘಾಟ್, ಜಯನಗರ್, ಮಥುರಾಪುರ್, ಡೈಮಂಡ್ ಹಾರ್ಬರ್, ಜಾದವ್​ಪುರ್, ಕೋಲ್ಕತಾ ದಕ್ಷಿಣ್ ಮತ್ತು ಕೋಲ್ಕತಾ ಉತ್ತರ್ ಈ 9 ಕ್ಷೇತ್ರಗಳಲ್ಲಿ ಒಂದು ದಿನ ಮುಂಚಿತವಾಗಿಯೇ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗುತ್ತಿದೆ.

ನಿನ್ನೆ ಕೋಲ್ಕತಾದಲ್ಲಿ ಅಮಿತ್ ಶಾ ರೋಡ್​ ಶೋ ವೇಳೆ ನಡೆದ ಹಿಂಸಾಚಾರ ಘಟನೆಗಳು ಚುನಾವಣಾ ಆಯೋಗದ ಈ ಕಠಿಣ ನಿರ್ಧಾರಕ್ಕೆ ಕಾರಣವಾಗಿದೆ. ವಿದ್ಯಾಸಾಗರ್ ಕಾಲೇಜು ಆವರಣದಲ್ಲಿ ನಿನ್ನೆ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಘರ್ಷಣೆಯಾಗಿ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಲ್ಲದೇ, ವಿದ್ಯಾಸಾಗರ್ ಕಾಲೇಜಿನಲ್ಲಿ ಬಿಜೆಪಿ ಕಾರ್ಯಕರ್ತರು ದಾಂಧಲೆ ನಡೆಸಿ ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಹಾಳುಗೆಡವಿದ ಆರೋಪವಿದೆ. ಅಷ್ಟೇ ಅಲ್ಲ, ಕಾಲೇಜಿನ ಮೇಜು ಇತ್ಯಾದಿ ಉಪಕರಣಗಳನ್ನೂ ಅವರು ಧ್ವಂಸ ಮಾಡಿದರೆನ್ನಲಾಗಿದೆ. ಈ ಹಿಂಸಾಕೃತ್ಯಕ್ಕೆ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳು ಪರಸ್ಪರ ದೂಷಾರೋಪಣೆ ಮಾಡಿಕೊಂಡಿವೆ. ತಮ್ಮ ಕಾರ್ಯಕರ್ತರು ವಿದ್ಯಾಸಾಗರ್​ ಪ್ರತಿಮೆಯನ್ನು ಒಡೆಯಲಿಲ್ಲ. ಇದು ಟಿಎಂಸಿ ಮಾಡಿರುವ ಚಿತಾವಣಿ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರಿಂದ ವಿಧ್ವಂಸಕ ಕೃತ್ಯ ನಡೆದಿರುವುದಕ್ಕೆ ತಮ್ಮ ಬಳಿ ವಿಡಿಯೋ ಸಾಕ್ಷಿಗಳಿವೆ ಎಂದು ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.

ಉಗ್ರರ ಕಾಟ ಇರುವ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಸಾಕಷ್ಟು ಹಿಂಸಾಚಾರಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಡುಗಿದ್ದರು.

Comments are closed.